ಚಿಕ್ಕಮಗಳೂರು: ಶೃಂಗೇರಿಯ ಪ್ರಸಿದ್ಧ ಶಾರದಾ ಮಠದ ಸಮೀಪವಿರುವ ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರುಪಾಲಾದ ದುರ್ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ದರ್ಶನ್ (22) ಎಂದು ಗುರುತಿಸಲಾಗಿದೆ. ತಮ್ಮ ಕುಟುಂಬಸ್ಥರೊಂದಿಗೆ ಶೃಂಗೇರಿ ಮಠದ ದರ್ಶನಕ್ಕೆ ಆಗಮಿಸಿದ್ದ ದರ್ಶನ್, ಮತ್ತಿಬ್ಬರು ಯುವಕರೊಂದಿಗೆ ತುಂಗಾ ನದಿಯಲ್ಲಿ ಈಜಾಡಲು ಇಳಿದಾಗ ಈ ಅನಾಹುತ ಸಂಭವಿಸಿದೆ.
ನದಿಯಲ್ಲಿ ಈಜುತ್ತಿದ್ದಾಗ ನೀರುಪಾಲಾಗುತ್ತಿದ್ದ ಮೂವರ ಪೈಕಿ ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ತೀವ್ರ ನೀರಿನ ಸೆಳೆತಕ್ಕೆ ಸಿಲುಕಿದ ದರ್ಶನ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ದರ್ಶನ್ ಅವರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.