ಬೆಂಗಳೂರು: ಗ್ರಾಮ ಪಂಚಾಯತಿಗಳಲ್ಲಿ ಇ-ಸ್ವತ್ತು ವಿತರಣೆಗೆ ಸಂಬಂಧಿಸಿದ ಅರ್ಜಿಗಳನ್ನು ಕಾಲಮಿತಿಯೊಳಗೆ ಶೀಘ್ರವಾಗಿ ವಿಲೇವಾರಿ ಮಾಡಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಮಹತ್ವದ ಸೂಚನೆ ನೀಡಿದೆ. ಇ-ಸ್ವತ್ತು ತಂತ್ರಾಂಶದಲ್ಲಿ ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆಗೆ ಇನ್ನು ಮುಂದೆ ಭೌತಿಕ ಕಡತಗಳನ್ನು (ಫಿಸಿಕಲ್ ಫೈಲ್ಸ್) ಕಡ್ಡಾಯವಾಗಿ ಕೇಳುವಂತಿಲ್ಲ ಎಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2025ರ ಪ್ರಕಾರ ಇ-ಸ್ವತ್ತು ದಾಖಲೆಗಳನ್ನು ನೀಡಲಾಗುತ್ತಿದ್ದು, ಗ್ರಾಮ ಪಂಚಾಯತಿ ಹಂತದಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಲಾಗಿನ್ಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿಯುತ್ತಿರುವ ಕುರಿತು ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಆಯುಕ್ತಾಲಯಕ್ಕೆ ಮನವಿ ಸಲ್ಲಿಸಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಇ-ಸ್ವತ್ತು ತಂತ್ರಾಂಶವನ್ನು ಪರಿಶೀಲಿಸಿದಾಗ, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತದಲ್ಲೇ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಅನುಮೋದನೆಗೊಳ್ಳದೆ ಬಾಕಿ ಉಳಿದಿರುವುದು ದೃಢಪಟ್ಟಿದೆ.
ಅಪೂರ್ಣ ಅಥವಾ ಅನುಮಾನಾಸ್ಪದ ಅರ್ಜಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಅರ್ಜಿಗಳ ಸಂಬಂಧಿತ ದಾಖಲೆಗಳು ತಂತ್ರಾಂಶದ ಲಾಗಿನ್ನಲ್ಲೇ ಲಭ್ಯವಿರುತ್ತವೆ. ಹೀಗಾಗಿ ಅಧಿಕಾರಿಗಳು ಭೌತಿಕ ಕಡತಗಳಿಗಾಗಿ ಕಾಯದೆ, ತಂತ್ರಾಂಶದಲ್ಲಿರುವ ದಾಖಲೆಗಳನ್ನೇ ಪರಿಶೀಲಿಸಿ ನಿಯಮಾನುಸಾರ ವಿಳಂಬವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತಾಲಯವು ಆದೇಶಿಸಿದೆ. ಈ ಕುರಿತು ತಮ್ಮ ವ್ಯಾಪ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.
