ಮಂಗಳೂರು: ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯು ಮಂಗಳೂರಿನ ಪಡಿಲ್‌ನಲ್ಲಿರುವ ‘ಪ್ರಜಾಸೌಧ’ದಲ್ಲಿ ಇಂದು ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಲಿದೆ. ಸಭೆಗೂ ಮುನ್ನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕದ್ರಿಯಿಂದ ಪಡಿಲ್‌ನ ಪ್ರಜಾಸೌಧದವರೆಗೆ ‘ಅಂಬಾರಿ’ ಓಪನ್ ಟಾಪ್ ಬಸ್‌ನಲ್ಲಿ ವಿಜೃಂಭಣೆಯ ಮೆರವಣಿಗೆಯ ಮೂಲಕ ತೆರಳಲಿದ್ದಾರೆ. ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಸಂತ್ರಸ್ತರೊಂದಿಗೆ ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದು, ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ವೇಳೆ ವಿರೋಧ ಪಕ್ಷ ಬಿಜೆಪಿಗೆ ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್, "ಯಾರೂ ಗಾಬರಿಯಾಗುವ ಅಗತ್ಯವಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವುದಲ್ಲ, ಅಭಿವೃದ್ಧಿಯೇ ನಮ್ಮ ಮುಖ್ಯ ಚಿಂತನೆ" ಎಂದು ತಿಳಿಸಿದರು. ಹೆಬ್ರಿ ಪ್ರವಾಸವನ್ನು ಮುಗಿಸಿ ಇಂದು ರಾತ್ರಿ ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿರುವ ಮುಖ್ಯಮಂತ್ರಿಗಳು, ನಾಳೆ ಬೆಳಿಗ್ಗೆ ಇಲ್ಲಿಂದ ನಿರ್ಗಮಿಸಲಿದ್ದಾರೆ.