ಮಂಡ್ಯ : ಜಗತ್ತನ್ನು ಭಗವಂತ ಸೃಷ್ಟಿಸಿದರೇ ಕಾವ್ಯವೆಂಬ ಮಹಾ ಸಂಪತ್ತನ್ನು ಕವಿ ಮತ್ತು ಸಾಹಿತಿಗಳು ಸೃಷ್ಟಿಸುತ್ತಾರೆ ಎಂದು ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಗುರುವಾರ ಹೇಳಿದರು.
ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬ್ರಹ್ಮದೇವನು ತನಗೆ ಬೇಕಾದ ರೀತಿಯಲ್ಲಿ ಜಗತ್ತನ್ನು ಸೃಷ್ಟಿಸಿದರೇ ಕವಿಗಳು ತಮ್ಮ ಸುತ್ತಮುತ್ತಲಿನ ಸಮಾಜವನ್ನ ಅದಕ್ಕೆ ಪೂರಕವಾದ ಸಾಹಿತ್ಯವನ್ನು ಸೃಷ್ಟಿ ಮಾಡುತ್ತಾರೆ. ಒಬ್ಬ ಕವಿ, ಸಾಹಿತಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾರೆ ಎನ್ನುವುದಿಲ್ಲ. ಆ ಪುಸ್ತಕಗಳನ್ನು ಓದಿದ ಮೇಲೆ ಎಷ್ಟು ಜನರ ಮನಸ್ಸು ಪರಿವರ್ತನೆ ಆಗಿದೆ ಅನ್ನುವುದು ಸಾಹಿತ್ಯ ಮೂಲಕ ತಿಳಿಯಲಿದೆ ಎಂದರು.
ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಸಾಹಿತ್ಯ ಕ್ಷೇತ್ರದ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭಾಷೆಯನ್ನು ಸಾಗರದಾಚೆಗೂ ವಿಸ್ತರಿಸಿದ ಕೀರ್ತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳದ್ದಾಗಿದೆ. ಶ್ರೀಗಳು ಕಾಲವಾಗುವ ಮೂರು ತಿಂಗಳ ಮುಂಚೆ ಅಮೇರಿಕಾದಲ್ಲಿ ಶ್ರೀ ಮಠದಿಂದ ಶಾಖೆಯನ್ನು ನಿರ್ಮಾಣ ಮಾಡಿದ್ದರು. ಅಕ್ಕ ಎಂಬ ಸಂಸ್ಥೆಯ ಮೂಲಕ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಾಭಿಮಾನಿಗಳಿಗೆ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಪಸರಿಸುವ ಕೆಲಸ ಮಾಡಲಾಗುತ್ತಿದೆ. ಅಕ್ಕ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಅಕ್ಕ ಸಮ್ಮೇಳನವನ್ನು ನಡೆಸಲಾಯಿತು. ನಮ್ಮ ಆಧುನಿಕ ಭಾಷೆಯ ಜೊತೆಗೆ ಸಂಸ್ಕೃತಿ, ಧಾರ್ಮಿಕ ಆಚರಣೆ ಉಳಿಯಬೇಕಾದರೆ ಇಂತಹ ಸಾಹಿತ್ಯ ಸಮ್ಮೇಳನಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಶ್ರೀಗಳು ಕಿವಿಮಾತು ಹೇಳಿದರು.
ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ ಮಾತನಾಡಿ, ಇಂಗ್ಲಿಷ್ ಭಾಷೆಯ ವ್ಯಾಮೋಹ ಮತ್ತು ಪರಭಾಷಿಕರ ಹಾವಳಿಯಿಂದಾಗಿ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಭಾಷಿಕರಿಗೆ ಕನ್ನಡ ಕಲಿಸುವ ಸಲುವಾಗಿಯೇ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಬೇಕು ಕರ್ನಾಟಕದಲ್ಲಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿ ಅವರನ್ನು ಕನ್ನಡಿಗರಾಗಿಯೇ ಮಾಡಬೇಕಿದೆ. ಈಗಿನ ಶಿಕ್ಷಣ ಪದ್ದತಿಯಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಅಪಾಯಕಾರಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರು ಹಾಗೂ ಕನ್ನಡ ಸಾಹಿತಿಗಳು ಕನ್ನಡಕ್ಕೆ ಹೆಚ್ಚು ಹೊತ್ತು ಕೆಲಸ ನಿರ್ವಹಿಸಬೇಕಾಗಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಸಂಪತ್ಬರಿತವಾದ ಕನ್ನಡ ಭಾಷೆಯನ್ನು ಸಂರಕ್ಷಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಕನ್ನಡ ನಶಿಸಿ ಹೋಗುವ ಹಾಗೂ ಇತರೆ ಭಾಷೆಗಳ ದಾಳಿಗೆ ಸಿಲುಕಿ ಬಲಹೀನವಾಗುವ ಪರಿಸ್ಥಿತಿ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಕನ್ನಡವನ್ನು ಸಂರಕ್ಷಿಸುವ ಕಾರ್ಯಕ್ಕೆ ತೊಡಗಬೇಕೆಂದು ಕೆಂಪಮ್ಮ ಸಲಹೆ ನೀಡಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮದ್ದೂರು ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆದಿರಲಿಲ್ಲ. ಹೀಗಾಗಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಗಣೇಶೋತ್ಸವ ಕಾರ್ಯಕ್ರಮದ ಆಚರಣೆ ಜೊತೆಗೆ ನಡೆಸಲು ತೀರ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕೆಲವು ಹೆಸರುಗಳು ಮುನ್ನೆಲೆಗೆ ಬಂದವು. ಆದರೆ ತಾಲೂಕಿನಲ್ಲಿ ಇಲ್ಲಿಯವರೆಗೂ ನಡೆದಿರುವ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ ಸಾಕಷ್ಟು ಚರ್ಚೆಗಳನ್ನು ಮಾಡಿ ಡಾ.ಎಂ.ಕೆಂಪಮ್ಮ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು.
ಕಳೆದ ವರ್ಷ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಸಲಾಗಿತ್ತು. ಅದೇ ರೀತಿಯಲ್ಲೆ ಮದ್ದೂರು ತಾಲೂಕಿನ ಸಾಹಿತ್ಯ ಸಮ್ಮೇಳನವನ್ನು ಯಾವುದೇ ಲೋಪ ದೋಷಗಳಾಗಂತೆ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸಾಕಷ್ಟು ಬುದ್ಧಿ ಜೀವಿಗಳಿದ್ದಾರೆ. ಬೇರೆ ಬೇರೆ ವಿಚಾರಗಳನ್ನು ಎಲ್ಲೆಲ್ಲೂ ಚರ್ಚೀಸುತ್ತಾರೆ. ಆದರೆ, ನಮ್ಮ ನೆಲ, ಜಲ, ಭಾಷೆ, ಅಭಿವೃದ್ಧಿ ವಿಚಾರದಲ್ಲಿ ಸಲಹೆ ಸೂಚನೆಗಳನ್ನು ನೀಡುವವರು ಬಹಳ ಕ್ಷೀಣ. ನಮ್ಮ ರಾಜ್ಯದಲ್ಲಿ 6 ಕೋಟಿಗೂ ಹೆಚ್ಚಿನ ಜನಸಂಖ್ಯೆ ಇದೆ. ಆದರೆ, ಅರ್ಧದಷ್ಟು ಜನ ಅನ್ಯ ಭಾಷಿಕರಾಗಿದ್ದಾರೆ. ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುತ್ತಿರುವುದು ಹಳೇ ಮೈಸೂರು ಪ್ರಾಂತ್ಯದಲ್ಲಿ ಮಾತ್ರವಾಗಿದೆ. ನಮ್ಮ ನೆಲ, ಜಲ, ಭಾಷೆಯನ್ನು ಉಳಿಸಲು ಎಲ್ಲರೂ ಕಂಕಣ ಬದ್ಧರಾಗಬೇಕೆಂದು ಶಾಸಕ ಉದಯ್ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, 1938ರ ಶಿವಪುರ ಧ್ವಜ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದ ಐತಿಹಾಸಿಕ ನೆಲ ಮದ್ದೂರು. ಇಂತಹ ಹೋರಾಟದ ಪರಂಪರೆ ಹೊಂದಿರುವ ತಾಲೂಕಿನ ಸಾಹಿತ್ಯ ಸಮ್ಮೇಳನವು ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಸುವ ವೇದಿಕೆಯಾಗಬೇಕು. ರೈತರ ಬದುಕು, ಯುವಕರ ಭವಿಷ್ಯ, ಉದ್ಯೋಗ ಹಾಗೂ ಶಿಕ್ಷಣದಂತಹ ವಿಷಯಗಳ ಬಗ್ಗೆಯೂ ಸಾಹಿತ್ಯ ವಲಯದಲ್ಲಿ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ಹಿಂದೆ ಪುಸ್ತಕಗಳ ಮೂಲಕ ಸಾಹಿತ್ಯವನ್ನು ಓದುವ ಮತ್ತು ಚರ್ಚಿಸುವ ಸಂಸ್ಕೃತಿ ಹೆಚ್ಚಾಗಿತ್ತು. ಇಂದು ಮೊಬೈಲ್ ಮೂಲಕ ಸಾಹಿತ್ಯವನ್ನು ಓದುವ, ನೋಡುವ ಹಾಗೂ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ತಂತ್ರಜ್ಞಾನದ ಬದಲಾವಣೆಯನ್ನು ಕನ್ನಡ ಸಾಹಿತ್ಯವೂ ಅಳವಡಿಸಿಕೊಂಡು ಹೊಸ ಪೀಳಿಗೆಯನ್ನು ಕನ್ನಡದತ್ತ ಸೆಳೆಯಬೇಕು ಎಂದು ಹೇಳಿದರು.
ಗಮನ ಸೆಳೆದ ಜಾನಪದ ಕಲಾಪ್ರಕಾರಗಳು
ಡೊಳ್ಳು ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಕೋಲಾಟ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಹಾಗೂ ಇದೇ ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ ಹಾಗೂ ಸುಮಾರು 1500 ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ಸಮ್ಮೇಳನಾಧ್ಯಕ್ಷರು ಹಾಗೂ ಗಣ್ಯರನ್ನು ವೇದಿಕೆಗೆ ಕರೆ ತಂದಿದ್ದು ಸಾಹಿತ್ಯಾಸ್ತಕರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.
ಸಮ್ಮೇಳನದಲ್ಲಿ ತಾಲೂಕು ದರ್ಶನ, ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಗಳು ಯಶಸ್ವಿಯಾಗಿ ನಡೆಯಿತು.
ಸಮ್ಮೇಳನಕ್ಕೆ ಆಗಮಿಸಿದವರಿಗೆ ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಪ್ಪಳ, ಕೊಸಂಬರಿ, ಪಲ್ಯ, ಮುದ್ದೆ, ಮೊಳಕೆಕಾಳು ಸಾರು, ಪಲಾವ್, ಹೊಳಿಗೆ, ಪಾಯಸ, ಅನ್ನ ಸಾಂಬಾರು, ರಸಂ, ಮಜ್ಜಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂದರಾ ಕದಲೂರು, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಣಸಾಲೆ ಸುನೀಲ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ್ ಸೇರಿದಂತೆ ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ