ತುಮಕೂರು: "ನಾನು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಮತ್ತು ಯಾವುದೇ ಇತರ ಪಕ್ಷಕ್ಕೂ ಹೋಗುವುದಿಲ್ಲ. ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿ ನೀಡುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂಬ ಬಲವಾದ ನಂಬಿಕೆ ನನ್ನಲ್ಲಿದೆ" ಎಂದು ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವೆಂದಿಗೂ ಕಾಂಗ್ರೆಸ್‌ನಲ್ಲೇ ಮುಂದುವರಿಯುವ ಮನಸ್ಥಿತಿಯಲ್ಲಿದ್ದು, ಪಕ್ಷವು ತಮಗೆ ಎಲ್ಲವನ್ನೂ ನೀಡಿದೆ ಎಂದು ಹೇಳಿದರು.
ಸಿದ್ದರಾಮಯ್ಯ ವೀಕ್ ಆದರೆ ಕಾಂಗ್ರೆಸ್ ವೀಕ್ ಇದ್ದಂತೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಕುರಿತು ಮಾತನಾಡಿದ ರಾಜಣ್ಣ, "ಸಿದ್ದರಾಮಯ್ಯ ಅವರು ವೀಕ್ ಆಗುತ್ತಿದ್ದಾರೆ ಎಂಬ ಮಾತುಗಳಲ್ಲಿ ಯಾವುದೇ ಸತ್ಯವಿಲ್ಲ. ಒಂದು ವೇಳೆ ಸಿದ್ದರಾಮಯ್ಯ ವೀಕ್ ಆದರೆ, ಅದು ಸಂಪೂರ್ಣ ಕಾಂಗ್ರೆಸ್ ಪಕ್ಷವೇ ವೀಕ್ ಆದಂತೆ. ರಾಜ್ಯದಲ್ಲಿ 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಮತಗಳನ್ನು ಸೆಳೆಯುವ ಅಪಾರ ಶಕ್ತಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ" ಎಂದು ಪ್ರತಿಪಾದಿಸಿದರು. ಪ್ರಾದೇಶಿಕ ರಾಜಕೀಯದ ಉದಾಹರಣೆ ನೀಡುತ್ತಾ, ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಜೆಡಿಎಸ್‌ನಲ್ಲಿ ದೇವೇಗೌಡರಿಗೆ ಮಾತ್ರ ಜನರಿಂದ ಮತ ತಂದುಕೊಡುವ ಶಕ್ತಿಯಿದೆ ಎಂದರು.
ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ನೀಡಿದ ಕಾಂಗ್ರೆಸ್:
ಅಸಹಾಯಕ ಹಾಗೂ ತಳ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಪುನರುಚ್ಚರಿಸಿದ ಸಚಿವರು, "ಸಾಮಾನ್ಯ ಕ್ಷೇತ್ರವಾಗಿದ್ದರೂ ಎಸ್.ಟಿ. ಸಮುದಾಯಕ್ಕೆ ಸೇರಿದ ನನಗೆ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಟಿಕೆಟ್ ನೀಡಿದೆ. ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಧರ್ಮಸಿಂಗ್ ಅವರಂತಹ ಹಿಂದುಳಿದ ಹಾಗೂ ತಳಸಮುದಾಯದ ನಾಯಕರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷದಲ್ಲಷ್ಟೇ ಸಾಧ್ಯವಾಯಿತು" ಎಂದು ಸಾರ್ಥಕತೆಯ ಮಾತುಗಳನ್ನಾಡಿದರು.
ಡಿ-ಲಿಮಿಟೇಶನ್ ಆದರೆ ಲೋಕಸಭೆಗೆ ಸ್ಪರ್ಧೆ:
ಮುಂದಿನ ರಾಜಕೀಯ ನಡೆ ಕುರಿತು ಸುಳಿವು ನೀಡಿದ ಅವರು, "ಕಾಂಗ್ರೆಸ್‌ನಲ್ಲಿ 10 ಲಕ್ಷ ಜನಸಂಖ್ಯೆಗೆ ಒಂದು ಲೋಕಸಭಾ ಕ್ಷೇತ್ರವನ್ನು ಪುನರ್ ವಿಂಗಡಣೆ (ಡಿ-ಲಿಮಿಟೇಶನ್) ಮಾಡುವ ಉದ್ದೇಶವಿದೆ. ಒಂದು ವೇಳೆ ಡಿಲಿಮಿಟೇಶನ್ ನಡೆದು ಮಧುಗಿರಿ ಉಪವಿಭಾಗದ ತಾಲೂಕುಗಳು ಹೊಸ ಲೋಕಸಭಾ ವ್ಯಾಪ್ತಿಗೆ ಸೇರಿದರೆ, ನಾನು ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ" ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಎಸ್.ಟಿ. ಸಮುದಾಯಕ್ಕೆ ಮೀಸಲಾತಿ ಜಾರಿಗೊಳಿಸಲು ಶ್ರಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಗ್ಗೆ ತಮಗೆ ಗೌರವವಿದೆ ಎಂದರು.
ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:
ಕ್ಷೇತ್ರದ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿದ ರಾಜಣ್ಣ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. "ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್ ಮತ್ತು ಇಒ ಪ್ರತಿದಿನ ಸಭೆ ನಡೆಸಿ, ಯಾವ ಗ್ರಾಮದಲ್ಲಿ ನೀರಿನ ಅಭಾವವಿದೆ ಎಂಬುದನ್ನು ತಕ್ಷಣ ಗುರುತಿಸಿ ಪರಿಹರಿಸಬೇಕು" ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.