ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಮಂಡ್ಯ ಮಣ್ಣಿನ ಮಗಳು ಹಾಗೂ ಕರ್ನಾಟಕದ ಹೆಮ್ಮೆಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಹೆಸರನ್ನು ಪರಿಗಣಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.
ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಮತ್ತು ವೈಭವವನ್ನು ಜಗತ್ತಿಗೆ ಪರಿಚಯಿಸುವ ಅಂತರರಾಷ್ಟ್ರೀಯ ಮಟ್ಟದ ಈ ಐತಿಹಾಸಿಕ ನಾಡಹಬ್ಬವನ್ನು ಉದ್ಘಾಟಿಸಲು, ನಾಡಿನೊಂದಿಗೆ ನಿಕಟ ನಂಟು ಹೊಂದಿರುವ, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಗಣ್ಯರನ್ನು ಆಹ್ವಾನಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೆಪ್ಟೆಂಬರ್ 2027ರಲ್ಲಿ ಅಧಿಕಾರ ಸ್ವೀಕರಿಸಲಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಸರ್ಕಾರ ಈ ಸಾಲಿನ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಅಪರೂಪದ ಐತಿಹಾಸಿಕ ಸಾಧನೆ
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಇಂಗಲಗುಪ್ಪೆ ಗ್ರಾಮದವರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಜನಮಾನಸದಲ್ಲಿ ಉಳಿಯುವಂತಹ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದ ದಿವಂಗತ ಇ.ಎಸ್. ವೆಂಕಟರಾಮಯ್ಯ ಅವರ ಸುಪುತ್ರಿಯಾಗಿದ್ದಾರೆ. 2027ರ ಸೆಪ್ಟೆಂಬರ್ 25ರಂದು ಇವರು ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದ್ದಾರೆ. ತಂದೆಯ ನಂತರ ಮಗಳೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುತ್ತಿರುವುದು ದೇಶದಲ್ಲೇ ಅತ್ಯಂತ ಅಪರೂಪದ ಐತಿಹಾಸಿಕ ದಾಖಲೆಯಾಗಿದೆ ಎಂದು ಪತ್ರದಲ್ಲಿ ಸ್ಮರಿಸಲಾಗಿದೆ.
ನ್ಯಾಯಾಂಗ ಕ್ಷೇತ್ರಕ್ಕೆ ಮಹತ್ವದ ಕೊಡುಗೆ
ಕರ್ನಾಟಕದ ನ್ಯಾಯಾಂಗ ಪರಂಪರೆಯೊಂದಿಗೆ ನಿಕಟ ಒಡನಾಟ ಹೊಂದಿರುವ ನ್ಯಾಯಮೂರ್ತಿ ನಾಗರತ್ನ ಅವರು ಸಂವಿಧಾನ, ಕಾನೂನು ಹಾಗೂ ನ್ಯಾಯಾಂಗ ಕ್ಷೇತ್ರಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಕರ್ನಾಟಕದ ನ್ಯಾಯಾಲಯಗಳ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಹೊರತಂದ “ಕೋರ್ಟ್ಸ್ ಆಫ್ ಇಂಡಿಯಾ” ಪುಸ್ತಕದ ಕೊಡುಗೆದಾರರಾಗಿರುವ ಇವರು, ಏಪ್ರಿಲ್ 2021ರಲ್ಲಿ ಬಿಡುಗಡೆಯಾದ ಅದೇ ಪುಸ್ತಕದ ಕನ್ನಡ ಅನುವಾದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಸಂದೇಶ
ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯುತ್ತಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಮಹಿಳೆಯರ ಧ್ವನಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿದಿರುವ ಧೀಮಂತ ಮಹಿಳೆಯಾಗಿದ್ದಾರೆ. ಹಲವು ಜನಪರ ತೀರ್ಪುಗಳ ಮೂಲಕ ಛಾಪು ಮೂಡಿಸಿರುವ ಇವರನ್ನು ನಾಡಹಬ್ಬದ ಉದ್ಘಾಟನೆಗೆ ಆಹ್ವಾನಿಸುವುದರಿಂದ ಮಹಿಳಾ ಸಬಲೀಕರಣದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ಇಡೀ ದೇಶದ ಮಹಿಳೆಯರಿಗೆ ಪ್ರೇರಣಾದಾಯಿ ಸಂದೇಶ ರವಾನಿಸಿದಂತಾಗುತ್ತದೆ. ನ್ಯಾಯಾಂಗ ಕ್ಷೇತ್ರದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಲಿರುವ ಇವರು ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನೀಡುವ ಸಂದೇಶವು ದಸರೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ.
ಆದ್ದರಿಂದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಅಪರಿಮಿತ ಸೇವೆ, ಸಾಧನೆ ಹಾಗೂ ಸಮಾಜಮುಖಿ ಕಾಳಜಿಯನ್ನು ಗೌರವಿಸಿ, ಸಮಸ್ತ ಮಹಿಳೆಯರ ಪ್ರೇರಣಾ ಶಕ್ತಿಯಾಗಿರುವ ಅವರನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಅಧಿಕೃತ ಉದ್ಘಾಟಕರನ್ನಾಗಿ ಆಯ್ಕೆ ಮಾಡಿ ಆಹ್ವಾನ ನೀಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..