ಮಂಡ್ಯ : ಮದ್ದೂರು ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ 108 ಗೌರಿ, ಗಣೇಶನ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು.
ನಗರದ ಮಳವಳ್ಳಿ ರಸ್ತೆಯಲ್ಲಿರುವ ಈಶ್ವರ ದೇವಾಲಯದ ಆವರಣದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿ.ಟಿ.ರವಿ, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಗಣ್ಯರು ಗೌರಿ, ಗಣೇಶನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷ ಮದ್ದೂರಿನಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ಇಂತಹ ಕಹಿ ಘಟನೆಗಳು ನಡೆಯುತ್ತವೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವ ಧರ್ಮದ ಪರವಾಗಿಯೂ ಇಲ್ಲ ಎನ್ನುವುದಾದರೆ ಮಸೀದಿ ಮುಂದೆ ಗಣೇಶನ ಮೂರ್ತಿ ಮೆರವಣಿಗೆ ಹೋಗಲು ಅವಕಾಶ ಇಲ್ಲ ಎಂದು ಆದೇಶ ಹೊರಡಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಹಿಂದುಗಳು ಮಾತ್ರ ಮಸೀದಿಗಳ ಮುಂದೆ ಹೋಗಬಾರದ ಹಾಗಿದ್ದರೆ ಹಿಂದು ದೇವಸ್ಥಾನಗಳ ಮುಂದೆ ಮುಸ್ಲಿಮರು ಹೋಗುವಾಗಿಲ್ಲ ಎಂದು ಆದೇಶ ಮಾಡಲಿ ರಾಜ್ಯದಲ್ಲಿ ಪೊಲೀಸರು ಗಣಪತಿಯ ಹೊಸ ಪರಂಪರೆ ಮಾಡ್ತಾ ಇದ್ದಾರೆ. ಪೊಲೀಸರು ಎಲ್ಲಿ ಮೈಕ್ ಹಾಕಬೇಕು, ಡಿಜೆ ಬೇಡಾ ಎಂಬುವುದನ್ನು ಅವರೆ ತೀರ್ಮಾನ ಮಾಡ್ತಾರೆ. ಮಸೀದಿ ಬಳಿ ಹೋಗಬಾರದು, ಡ್ಯಾನ್ಸ್ ಮಾಡಬಾರದು, ಪಟಾಕಿ ಹೊಡೆಯಬಾರದು ಅಂತಾರೆ. ಇವರಿಗಿಂತ ಬ್ರಿಟಿಷರೇ ಮೇಲು ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟಿ.ನರಸೀಪುರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಒಂದು ಹೆಜ್ಜೆ ಮುಂದೆ ಹೋಗಿ ಹಿಂದುಗಳಿಗೆ ಗ್ರಹಚಾರ ಬಿಡಿಸುತ್ತೇನೆ ಎನ್ನುತ್ತಾರೆ ಆದರೆ, ಅದೇ ರೀತಿ ಮುಸ್ಲಿಮರಿಗೆ ಹೇಳುತ್ತಾರಾ ಮುಸ್ಲಿಮರು ರಸ್ತೆಯಲ್ಲೆ ನಮಾಜ್ ಮಾಡುತ್ತಾರೆ. ಆದರೆ, ಗಣಪತಿಯನ್ನು ರಸ್ತೆಯಲ್ಲೆ ಕುರಿಸಿದರೆ ವಿರೋಧ ಮಾಡುತ್ತಾರೆ. ಕಾಂಗ್ರೆಸ್ ನವರಿಗೆ ಚುನಾವಣೆಗಳು ಬಂದಾಗ ಮಾತ್ರ ಹಿಂದುಗಳ ಮತ ಬೇಕು. ನಂತರ ಮುಸ್ಲಿಮರು ಬೇಕು ಎಂದು ವ್ಯಂಗ್ಯವಾಡಿದರು.
ಅಷ್ಟೇ ಅಲ್ಲದೆ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಇನ್ನಿಲ್ಲದ ನಿಯಮಗಳನ್ನು ವಿಧಿಸುತ್ತಾರೆ. ಡಿಜೆ ಹಾಕಿದ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಡಿಜೆ ಮಾಲೀಕರ ಮೇಲೆಯೇ ಕೇಸ್ ಹಾಕಿದ್ದಾರೆ ಆದರೆ, ಮಸೀದಿಗಳಲ್ಲಿ ಪ್ರತಿದಿನ ಆಜಾನ್ ಕೂಗುವವರ ಮೇಲೆ ಏಕೆ ಕೇಸ್ ಹಾಕಲ್ಲ, ಎಂದಾದರೂ ಮಸೀದಿಗಳಿಗೆ ನೋಟಿಸ್ ಕೊಟ್ಟಿದ್ದಾರೆಯೇ ರಾಜ್ಯ ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದೇ ರೀತಿಯಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗುತ್ತದೆ ಎಂದರು.
ನಮ್ಮ ಹೋರಾಟ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಬೇಕು. ಪೊಲೀಸರ ಹಬ್ಬವಾಗಬಾರದು. ಇದು ಗಣೇಶ ಮೆರವಣಿಗೆ ಮಾತ್ರವಲ್ಲ ಕಾಂಗ್ರೆಸ್ ವಿರುದ್ಧದ ಧ್ವನಿ. ಈ ಸರ್ಕಾರ ಮುಂದಿನ ವರ್ಷ ಇದ್ದರೆ ಗಣೇಶ ಹಬ್ಬಕ್ಕೆ ಅವಕಾಶ ನೀಡಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಹಿಂದುತ್ವ ದುರ್ಬಲ ಆದ್ರೆ ರಾಷ್ಟ್ರ ದುರ್ಬಲ ಆಗುತ್ತೆ. ಹಿಂದೂ ದುರ್ಬಲ ಆದ್ರೆ ಸಂವಿಧಾನ ಉಳಿಯಲ್ಲ. ದೇಶದಲ್ಲಿ ಜಾತ್ಯಾತೀತತೆ ಸತ್ತೋಗುತ್ತೆ. ಗಣೇಶೋತ್ಸವ ಸಾರ್ವಜನಿಕರ ಹಿಂದುತ್ವದ ಉತ್ಸವ ಆಗಬೇಕು. ನಾವೆಲ್ಲ ಹಿಂದೂ ಒಂದು ಅನ್ನೋ ಭಾವ ಬೆಳೆಯಬೇಕು. ಜಾತೀಯತೆಯ ಅಸ್ತ್ರ ಬೆಳೆಸುತ್ತಾರೆ ಇದರಿಂದ ರಾಷ್ಟ್ರಕ್ಕೆ ಹಾಗೂ ಹಿಂದುತ್ವಕ್ಕೆ ಅಪಾಯವಿದೆ. ಹಿಂದುತ್ವ ಜಾಗೃತಿ ಆಗಬೇಕು ಬರಿ ಕಡುಬು ತಿನ್ನುವುದಲ್ಲ ಗಣಪತಿ ಹೆಸರಿನಲ್ಲಿ ಭಯೋತ್ಪಾದನೆ ನಡೆದಿಲ್ಲ ಎಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ ಯಾರನ್ನು ಯಾವ ರೀತಿ ಕಂಟ್ರೋಲ್ ಮಾಡಬೇಕೆಂದು ಗೊತ್ತಿದೆ. ಕಾನೂನು ಬಾಹಿರವಾಗಿ ಬೇರೆಯವರು ಮಾಡಿದರೆ ತಪ್ಪು. ಸರ್ಕಾರವೇ ತಪ್ಪು ಮಾಡಿದ್ರೆ ಯಾರು ಕ್ರಮ ತೆಗೆದುಕೊಳ್ಳಬೇಕು. ಡಿಜೆ ಇಟ್ಟಿರುವವರ ಮೇಲೆ ಕೇಸ್ ಹಾಕಿದ್ರೆ ಹೇಗೆ ಮುಂದೆ ಈ ಸರ್ಕಾರ ಗಣಪತಿ ಮಾಡುವವರ ಮೇಲೆ ಕೇಸ್ ಹಾಕಬಹುದು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಳೆದ ವರ್ಷ ನಗರದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆದ ಗಲಭೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಎಸ್.ಪಿ.ಶೋಭಾರಾಣಿ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು.
1 ಎಸ್ಪಿ. 4 ಡಿವೈಎಸ್ಪಿ, 10 ಪಿಐ, 14 ಪಿಎಸ್ಓ, 35 ಎಎಸ್ಐ, 2 ಕೆಎಸ್ಆರ್ಪಿ, 1 ಸಿಆರ್ಪಿಎಫ್ ಸೇರಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡುವ ಜತೆಗೆ ಮೆರವಣಿಗೆ ತೆರಳುವ ಮಾರ್ಗಗಳಲ್ಲಿ 30 ಕ್ಕೂ ಹೆಚ್ಚು ಸಿಸಿಟಿವಿಗಳ ಅಳವಡಿಕೆ ಮಾಡಲಾಗಿತ್ತು.
ಮಳವಳ್ಳಿ ರಸ್ತೆಯ ಈಶ್ವರ ದೇವಾಲಯದಿಂದ ರ್ಯಾಲಿ ಆರಂಭವಾಗಿ, ಪೇಟೆ ಬೀದಿ ಮಾರ್ಗವಾಗಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾರ್ಗ ಮಧ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿತ್ತು.
ಸಾಮೂಹಿಕ ಗಣಪತಿ ವಿಸರ್ಜನೆ ನಗರದ ಪೇಟೆಬೀದಿಯಲ್ಲಿರುವ ಜಾಮಿಯಾ ಮಸೀದಿ ಬಳಿಗೆ ಬರುತ್ತಿದ್ದಂತೆ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಘೋಷಣೆ ಕೂಗಿ ಘೋಷಣೆ ಕೂಗಿ ಪಟಾಕಿ ಸಿಡಿಸಲು ಯತ್ನಸಿದಾಗ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಯತ್ನಿಸಿದರು. ತಕ್ಷಣವೇ ಎಚ್ಚೆತ್ತುಕೊಂಡ ಎಸ್ಪಿ ಶೋಭಾರಾಣಿ ಹಿಂದೂ ಕಾರ್ಯಕರ್ತರ ಮನವೊಲಿಸಿ ರಸ್ತೆಯಿಂದ ಎದ್ದು ಮುಂದೆ ಹೋಗುವಂತೆ ಮಾಡಿದರು. ಆದರೂ ಇದಕ್ಕೆ ಒಪ್ಪದ ಹಿಂದು ಕಾರ್ಯಕರ್ತರು ಪಟಾಕಿ ಸಿಡಿಸಿದ ನಂತರವೇ ಮೆರವಣಿಗೆ ಮೂಲಕ ಮುಂದಕ್ಕೆ ತೆರಳಿದರು. ಇದರಿಂದ ಕೆಲಕಾಲ ಪರಿಸ್ಥಿತಿ ಬಿಗುವಿನ ವಾತಾವರಣ ಕೂಡಿತ್ತು ನಂತರ ಪರಿಸ್ಥಿತಿ ತಿಳಿಗೊಂಡಿತು.
ಸುಮಾರು 4 ಕಿ.ಮೀ ದೂರವರೆಗೆ ಮಹಿಳಾ ಕೋಲಾಟ, ಕಂಸಾಳೆ, ಗಾರುಡಿಗೊಂಬೆ, ಡೊಳ್ಳು ಕುಣಿತ, ಕಹಳೆ, ಪಟದ ಕುಣಿತ, ಕೀಲು ಕುದುರೆ, ತಮಟೆ ವಾದ್ಯ ಸೇರಿದಂತೆ ಇನ್ನಿತರ ಕಲಾ ಪ್ರಕಾರಗಳೊಂದಿಗೆ 108 ಗೌರಿ, ಗಣೇಶನ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ಕರೆ ತಂದು ಸೋಮನಹಳ್ಳಿ ಬಳಿಯಿರುವ ಶಿಂಷಾ ನದಿಗೆ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.
ಇದೇ ವೇಳೆ ಮನ್ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಆರ್ ಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಅವಿನಾಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಮಾದನಾಯಕನಹಳ್ಳಿ ರಾಜಣ್ಣ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮಹಿಳಾ ಅಧ್ಯಕ್ಷೆ ಶ್ವೇತಾ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ