ಬೆಂಗಳೂರು: ಕೌಟುಂಬಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದ ಮಂಗಳೂರು ಮೂಲದ ದಂಪತಿಯ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಂಪತಿಗೆ ವಿಚ್ಛೇದನ ಮಂಜೂರು ಮಾಡಿರುವ ನ್ಯಾಯಾಲಯ, ಪತ್ನಿಗೆ 50 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನಿಗದಿಪಡಿಸಿದೆ. ಇದೇ ವೇಳೆ, "ವಿವಾಹ ಬಂಧನ ಅಂತ್ಯಗೊಂಡರೂ ಮಕ್ಕಳ ಮೇಲಿನ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳಿಗೆ ಒಳ್ಳೆಯ ಪೋಷಕರಾಗಿರಿ" ಎಂದು ಭಾವನಾತ್ಮಕ ಕಿವಿಮಾತು ಹೇಳಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು, ಮಂಗಳೂರಿನ 40 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. ಈ ಹಿಂದೆ ಜೂನ್ 20, 2026ರಂದು ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 2 ಕೋಟಿ ರೂಪಾಯಿ ಶಾಶ್ವತ ಜೀವನಾಂಶ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆರ್ಥಿಕ ಸ್ಥಿತಿ ಪರಿಗಣಿಸಿ ಜೀವನಾಂಶ ಕಡಿತ: ಕಾಲೇಜು ಸಹಪಾಠಿಗಳಾಗಿದ್ದ ಈ ದಂಪತಿ 2011ರಲ್ಲಿ ಮಂಗಳೂರಿನಲ್ಲಿ ವಿವಾಹವಾಗಿದ್ದರು. ಬಳಿಕ ದಂಪತಿ ಬ್ರಿಟನ್‌ಗೆ ತೆರಳಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಪತ್ನಿ 2021ರಲ್ಲಿ ಪತಿಯಿಂದ ದೂರವಾಗಿ ಭಾರತದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಪತ್ನಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಆರ್ಥಿಕ ಸ್ವಾವಲಂಬನೆಯನ್ನು ಪರಿಗಣಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯ ನೀಡಿದ್ದ 2 ಕೋಟಿ ರೂ. ಜೀವನಾಂಶವನ್ನು 50 ಲಕ್ಷ ರೂ.ಗೆ ಇಳಿಸಿ ಆದೇಶ ನೀಡಿದೆ.
ಮಕ್ಕಳ ಶೈಕ್ಷಣಿಕ ಹಾಗೂ ನಿರ್ವಹಣಾ ವೆಚ್ಚ: ಜೀವನಾಂಶ ಮೊತ್ತ ತಗ್ಗಿಸಿದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪತಿಗೆ ಹೈಕೋರ್ಟ್ ಪ್ರಮುಖ ಸೂಚನೆಗಳನ್ನು ನೀಡಿದೆ. ಪ್ರತಿ ಮಗುವಿನ ನಿರ್ವಹಣೆ, ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ತಿಂಗಳಿಗೆ ತಲಾ 25,000 ರೂಪಾಯಿಯನ್ನು ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಪಾವತಿಸಬೇಕು ಎಂದು ಪತಿಗೆ ನಿರ್ದೇಶಿಸಿದೆ. ಅಷ್ಟೇ ಅಲ್ಲದೆ, ಪ್ರತಿ ವರ್ಷ ಪೂರ್ಣಗೊಂಡ ಬಳಿಕ ಈ ಮಾಸಿಕ ಮೊತ್ತಕ್ಕೆ ತಲಾ 5,000 ರೂಪಾಯಿ ಹೆಚ್ಚಿಸಬೇಕು ಮತ್ತು ಮಕ್ಕಳು ಪ್ರಾಪ್ತ ವಯಸ್ಸಿಗೆ ತಲುಪುವವರೆಗೆ ಈ ಏರಿಕೆ ಮುಂದುವರಿಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಕ್ಕಳ ಭೇಟಿಗೆ ಅವಕಾಶ ಮತ್ತು ಪ್ರಯಾಣದ ಮೇಲಿನ ನಿರ್ಬಂಧ: ವಿಶೇಷವಾಗಿ ಮಕ್ಕಳ ವಿವಾಹದ ಸಂದರ್ಭದಲ್ಲಿ ತನ್ನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೀತಿ-ವಾತ್ಸಲ್ಯದಿಂದ ವೆಚ್ಚ ಭರಿಸಬೇಕು ಎಂದು ಪತಿಗೆ ತಿಳಿಸಿರುವ ನ್ಯಾಯಾಲಯ, ತಂದೆಗೆ ಮಕ್ಕಳ ಭೇಟಿಯ ಹಕ್ಕನ್ನೂ ಕಲ್ಪಿಸಿದೆ. ಪತಿಯು ಪ್ರತಿ ಶನಿವಾರ ಮತ್ತು ಭಾನುವಾರ ತಾಯಿಯ ಸಮ್ಮುಖದಲ್ಲಿ ತಲಾ ಮೂರು ಗಂಟೆಗಳ ಕಾಲ ಮಕ್ಕಳನ್ನು ಭೇಟಿಯಾಗಬಹುದು ಹಾಗೂ ಆಡಿಯೋ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿರಬಹುದು. ಇದೇ ವೇಳೆ, ಪತಿಯ ಮುಂಚಿತ ಮಾಹಿತಿ ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ಮಕ್ಕಳನ್ನು ಭಾರತದ ಹೊರಗೆ ಸ್ಥಳಾಂತರಿಸಬಾರದು ಎಂದು ಪತ್ನಿಗೆ ಕೋರ್ಟ್ ನಿರ್ದೇಶನ ನೀಡಿದೆ.