ಶಿವಮೊಗ್ಗ: ಕರ್ತವ್ಯದ ಸಮವಸ್ತ್ರದಲ್ಲಿದ್ದಾಗ ಶಾಸಕರನ್ನು ಹೆಗಲ ಮೇಲೆ ಹೊತ್ತು ಕುಣಿದು ವಿವಾದಕ್ಕೀಡಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಬೇರೆ ಠಾಣೆಗಳಿಗೆ ವರ್ಗಾಯಿಸಿ ಆದೇಶಿಸಿದ್ದಾರೆ.
ಘಟನೆಯ ವಿವರ
ಪೂರ್ವ ಸಂಚಾರ ಠಾಣೆಯ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ತುಂಗಾ ನದಿಯ ಭೀಮನಮಡು ಕಡೆಗೆ ಸಾಗುತ್ತಿದ್ದಾಗ ಈ ಪ್ರಸಂಗ ನಡೆದಿತ್ತು. ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಸಮೀಪ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ, ಸ್ಥಳೀಯ ಶಾಸಕ ಚನ್ನಬಸಪ್ಪ ಅವರನ್ನು ಅದೇ ಠಾಣೆಯ ಸಿಬ್ಬಂದಿಯಾದ ಗಣೇಶ್ ಹಾಗೂ ಪ್ರಕಾಶ್ ಎ.ಕೆ. ಎಂಬುವರು ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮದಿಂದ ಹೆಜ್ಜೆ ಹಾಕಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ
ಖಾಕಿ ಸಮವಸ್ತ್ರದಲ್ಲೇ ಜನಪ್ರತಿನಿಧಿಯನ್ನು ಹೊತ್ತು ನರ್ತಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕರ್ತವ್ಯ ನಿರತ ಪೊಲೀಸರ ಈ ರೀತಿಯ ಅತಿ ಉತ್ಸಾಹವು ಇಲಾಖೆಯ ಘನತೆ ಹಾಗೂ ಶಿಸ್ತಿಗೆ ಧಕ್ಕೆ ತಂದಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಎಸ್ಪಿ ಬಿ. ನಿಖಿಲ್ ಶಿಸ್ತುಕ್ರಮ
ಸಾರ್ವಜನಿಕ ಟೀಕೆಗೆ ಕಾರಣವಾದ ಈ ಅಶಿಸ್ತಿನ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣವೇ ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ. ಪೇದೆ ಗಣೇಶ್ ಅವರನ್ನು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣೆಗೆ ಹಾಗೂ ಪ್ರಕಾಶ್ ಎ.ಕೆ. ಅವರನ್ನು ಸೊರಬ ತಾಲೂಕಿನ ಆನವಟ್ಟಿ ಠಾಣೆಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದಾರೆ.