ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಆಸೆ ಕೊನೆಗೂ ಈಡೇರಿದೆ. ಗಣೇಶ ಚತುರ್ಥಿಯ ಶುಭ ದಿನದಂದು ಸಿದ್ದರಾಮಯ್ಯ ಕುಟುಂಬಸ್ಥರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ತಮ್ಮ ನೂತನ ನಿವಾಸದ ಗೃಹಪ್ರವೇಶ ನೆರವೇರಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ 80*120 ಅಳತೆಯ ನಿವೇಶನದಲ್ಲಿ ಈ ವಿಶಾಲವಾದ ಎರಡು ಅಂತಸ್ತಿನ ನೂತನ ಬಂಗಲೆಯನ್ನು ನಿರ್ಮಿಸಲಾಗಿದೆ. ಯಾವುದೇ ಅಧಿಕೃತ ಪ್ರವಾಸ ಪಟ್ಟಿ ಇಲ್ಲದೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕುಟುಂಬದ ಇತರ ಸದಸ್ಯರೊಂದಿಗೆ ಗೃಹಪ್ರವೇಶದ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.
ನಿನ್ನೆ ರಾತ್ರಿಯಿಂದಲೇ ನೂತನ ನಿವಾಸದಲ್ಲಿ ವಿವಿಧ ಧಾರ್ಮಿಕ ಹೋಮ ಮತ್ತು ಪೂಜೆಗಳನ್ನು ನೆರವೇರಿಸಲಾಗಿತ್ತು. ಇಂದು ಬೆಳಗಿನ ಜಾವವೂ ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಪೂರೈಸಿ, ಸಾರ್ವಜನಿಕರ ಆಡಂಬರವಿಲ್ಲದೆ ಕೇವಲ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಮನೆಗೆ ಪ್ರವೇಶಿಸಲಾಯಿತು.