ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಅವರ ಧರ್ಮಪತ್ನಿ ಧನ್ಯತಾ ದಂಪತಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಇತ್ತೀಚೆಗಷ್ಟೇ ಗಂಡು ಮಗುವಿನ ತಂದೆ-ತಾಯಿಯಾಗಿದ್ದ ಈ ಮುದ್ದಾದ ಜೋಡಿ, ಇದೀಗ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಡಾಲಿ ದಂಪತಿ ತಮ್ಮ ಮಗನಿಗೆ ‘ಎರೆಯ’ (Ereya) ಎಂದು ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ನಾಮಕರಣ ಮಾಡಿದ್ದಾರೆ.
ಕರ್ನಾಟಕದ ನಕ್ಷೆಯ ವಿನ್ಯಾಸದ ಮಧ್ಯೆ ಮಗನ ‘ಎರೆಯ’ ಎಂಬ ಹೆಸರನ್ನು ಕೆತ್ತಿಸಿರುವ ಸುಂದರ ಡಾಲರ್‌ನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಇತಿಹಾಸದಲ್ಲಿ ‘ಎರೆಯ’ ಎಂದರೆ ಒಡೆಯ, ರಾಜ ಅಥವಾ ಅಧಿಪತಿ ಎಂದರ್ಥ. ಅಷ್ಟೇ ಅಲ್ಲದೆ, ಚಾಲುಕ್ಯ ಸಾಮ್ರಾಜ್ಯದ ಶ್ರೇಷ್ಠ ದೊರೆ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಕೂಡ ‘ಎರೆಯ’ ಎಂದಾಗಿತ್ತು. "ಆ ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ 'ಎರೆಯ'" ಎಂದು ಧನಂಜಯ್ ದಂಪತಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಮತ್ತು ಧನ್ಯತಾ, ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ 'ನಮ್ಮ ಪ್ರಪಂಚ ವಿಸ್ತರಿಸುತ್ತಿದೆ' ಎಂದು ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ತಾವು ಪೋಷಕರಾಗುತ್ತಿರುವ ವಿಷಯ ತಿಳಿಸಿದ್ದರು. ಇದೀಗ ಗಣೇಶ ಹಬ್ಬದಂದೇ ತಮ್ಮ ಪುಟ್ಟ ‘ಎರೆಯ’ನ ಹೆಸರನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ದಂಪತಿ ಡಬಲ್ ಧಮಾಕಾ ನೀಡಿದ್ದಾರೆ.