LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

ಬೆಂಗಳೂರು- ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣ ನೀರು ಸರಬರಾಜು ಮತ್ತು ಮೂಲಸೌಕರ್ಯದ ಸುಸ್ಥಿರ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಮತ್ತು ವೆಬ್ ಅಪ್ಲಿಕೆಷನ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಜಿಯೋ ಟ್ಯಾಗ್ ಮಾಡಿ ಪಾರದರ್ಶಕತೆ ತರಲಾಗುವುದು ಎಂದರು.

ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳಿದ್ದು ಇವೆಲ್ಲವನ್ನೂ ಸೆಪ್ಟೆಂಬರ್ ಅಂತ್ಯದೊಳಗೆ ಡಿಜಟಲೀಕರಿಸಲಾಗುವುದು. ಈಗಾಗಲೇ ಮೊದಲ ಹಂತದ ಪರಿಶೀಲನೆ ಅಡಿಯಲ್ಲಿ ಈವರೆಗೆ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಆ ವ್ಯವಸ್ಥೆಯಡಿ 3 ಹಂತದ ಪರಿಶೀಲನೆ ನಡೆಯಲಿದ್ದು, ಮೊದಲ ಹಂತದಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಸಪೋರ್ಟ್ ಎಂಜಿನಿಯರ್ ಗಳು ನೂರಕ್ಕೆ 100ರಷ್ಟು ಜಲ ಆಸ್ತಿಯ ಖುದ್ದು ಪರಿಶೀಲನೆ ನಡೆಸಲಿದ್ದಾರೆ. 2ನೇ ಹಂತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು ಶೇ.5ರಷ್ಟು ಆಸ್ತಿಯ ಯಾದೃಚ್ಛಿಕ (Random) ಪರಿಶೀಲನೆ ಮಾಡುತ್ತಾರೆ. ಈ ಹಂತದಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಿತ ಗುತಿಗೆದಾರರು, ಎಂಜಿನಿಯರುಗಳನ್ನು ಹೊಣೆ ಮಾಡಲಾಗುವುದು ಎಂದರು.

ಮೂರನೇ ಹಂತದಲ್ಲಿ ಕಾರ್ಯಪಾಲಕ ಎಂಜಿನಿಯರ್ ಶೇ.2ರಷ್ಟು ಆಸ್ತಿಯ ಯಾದೃಚ್ಛಿಕ ಪರಿಶೀಲನೆ ನಡೆಸುತ್ತಾರೆ. 3 ಹಂತದ ತಪಾಸಣೆ ನಡೆಯುವ ಕಾರಣ ಗುತ್ತಿಗೆದಾರರಿಗೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಅನುಷ್ಠಾನ ಮಾಡುವ ಕೆಳ ಹಂತದ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ ಮತ್ತು ಇದು ಪಾರದರ್ಶಕತೆ ತರಲು ಸಹಕಾರಿಯಾಗುತ್ತದೆ ಎಂದರು.

ಆಪ್ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವವರು

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಈ ಮೊಬೈಲ್ ಮತ್ತು ವೆಬ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ ಈಶ್ವರ ಖಂಡ್ರೆ, ಇದು ಎಲ್ಲ ಕಾಮಗಾರಿ ಮತ್ತು ಜಲ ಆಸ್ತಿಗಳನ್ನು 5 ಮೀಟರ್ ನಿಖರತೆಯೊಂದಿಗೆ ಜಿಯೋ ಟ್ಯಾಗ್ ಮಾಡಲು ನೆರವಾಗುತ್ತದೆ ಎಂದರು.

ಇದರಿಂದ ಕಾಮಗಾರಿಯನ್ನೇ ಮಾಡದೆ ನಕಲಿ ಬಿಲ್ ಮಾಡಲು ಅವಕಾಶ ಇರುವುದಿಲ್ಲ ಮತ್ತು ಸೃಜಿಸಲಾದ ಆಸ್ತಿಯ ಗುಣಮಟ್ಟದ ಪರೀಕ್ಷೆಗೂ ಸಹಕಾರಿಯಾಗುತ್ತದೆ. ಎಲ್ಲ ಜಲ ಆಸ್ತಿಗಳ ಮೂಲ ಮಾಹಿತಿ, ಅವುಗಳ ಭೌತಿಕ ಸ್ಥಿತಿ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸ್ಥಿತಿಗತಿ ಈ ಆಪ್ ನಲ್ಲಿ ದಾಖಲಾಗುವ ಕಾರಣ ಸರ್ಕಾರದ ಯೋಜನೆ ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಆಪ್ ನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕೊರೆಸಲಾಗುವ ಬೋರ್ ವೆಲ್, ನಿರ್ಮಿಸಲಾಗುವ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿ, ಪಂಪ್ ಹೌಸ್, ಜಲ ಶುದ್ಧೀಕರಣ ಘಟಕ, ಸಮತೋಲಿತ ಕೆರೆಗಳು, ಸರೋವರ, ಪ್ರಯೋಗಾಲಯ, ಕೈ ಪಂಪ್ ಇತ್ಯಾದಿಗಳನ್ನು ಕಡ್ಡಾಯವಾಗಿ ಜಿಯೋ ಟ್ಯಾಗ್ ಮಾಡಲು ಸೂಚಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಈಗಾಗಲೇ ಗ್ರಾಮೀಣ ಭಾಗದಲ್ಲಿ ಸೃಜಿಸಲಾಗಿರುವ ಎಲ್ಲ ಕುಡಿಯುವ ನೀರಿನ ಆಸ್ತಿಗಳನ್ನು ಮೊದಲಿಗೆ ಜಿಯೋ ಟ್ಯಾಗ್ ಮಾಡಿ ದಾಖಲೀಕರಣ ಮಾಡಬೇಕು. ನಂತರ ಹೊಸ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಜಿಯೋ ಟ್ಯಾಗ್ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಜೊತೆಗೆ ಕೊಳವೆ ಬಾವಿ ಕೊರೆದಿರುವ ಬಗ್ಗೆ ಜಿಯೋ ಟ್ಯಾಗ್ ಮಾಡುವ ಕಾರಣ ಮೂರನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಿದಾಗ ಎಷ್ಟು ಅಡಿ ಕೊಳವೆ ಬಾವಿ ಕೊರೆದಿದ್ದಾರೆ, ಎಷ್ಟು ಆಳಕ್ಕೆ ಪೈಪ್ ಅಳವಡಿಸಿದ್ದಾರೆ. ಎಷ್ಟು ಎಚ್.ಪಿ. ಮೋಟರ್ ಅಳವಡಿಸಿದ್ದಾರೆ ಎಂಬ ಎಲ್ಲ ಮಾಹಿತಿ ಜಿಯೋ ಟ್ಯಾಗ್ ಆಗಿ ದಾಖಲಾಗುವ ಕಾರಣ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದೂ ಸಚಿವರು ತಿಳಿಸಿದರು.

ಪಾರದರ್ಶಕ ಮತ್ತು ಜನಸ್ನೇಹಿ ಯೋಜನೆ

ಇಲಾಖೆಯಲ್ಲಿ ಪಾರದರ್ಶಕತೆ ತರುವ ಮೂಲಕ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಹೆಚ್ಚು ಜನಸ್ನೇಹಿಯಾಗಿ ಮಾಡುವುದು ಇಲಾಖೆಯ ಉದ್ದೇಶವಾಗಿದ್ದು, ಈ ಹೊಸ ಆಪ್ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ತರಬೇತಿಯನ್ನೂ ಕೊಡಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಪಂಪ್ ಸೆಟ್ ಮತ್ತು ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಿ, ಅನಗತ್ಯವಾಗಿ ವಿದ್ಯುತ್ ಬಿಲ್ ಹೊರೆ ಬಾರದಂತೆ ಕ್ರಮ ವಹಿಸುವಂತೆಯೂ ಈ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಹಾಜರಿದ್ದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಬತ್ತಿ ಹೋಗಿರುವ ಕೊಳವೆ ಬಾವಿಗಳ ಮರು ಪೂರಣಕ್ಕೆ ವಿಬಿಜಿ ರಾಮ್ ಜಿ ಅಡಿಯಲ್ಲಿ ಕ್ರಮ ವಹಿಸಲು ಸೂಚಿಸಲಾಗಿದೆ. 7700 ಕೊಳವೆ ಬಾವಿಗಳನ್ನು ಈವರೆಗೆ ಮರು ಪೂರಣ (ರೀ ಚಾರ್ಜ್) ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರದ ವತಿಯಿಂದ ಎಷ್ಟು ಕೊಳವೆ ಬಾವಿ ಕೊರೆಯಲಾಗಿದೆ. ಎಷ್ಟು ನಿಷ್ಕ್ರಿಯವಾಗಿದೆ. ಎಷ್ಟು ಮರುಪೂರಣಕ್ಕೆ ಅರ್ಹವಾಗಿವೆ ಎಂಬ ಮಾಹಿತಿ ಕಲೆಹಾಕಿ, ಕಾರ್ಯಸಾಧ್ಯವಾದ ಕೊಳವೆ ಬಾವಿಗಳ ಮರುಪೂರಣಕ್ಕೆ ಸೂಚನೆ ನೀಡಲಾಗಿದೆ ಎಂದರು.

ಉದ್ಯೋಗ ಸೃಜನೆಯ ಯೋಜನೆ

ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 187 ಕೋಟಿ ಮಾನವ ದಿನ ಸೃಜನೆ ಮಾಡಲಾಗಿತ್ತು. ಆಗ ಕೇಂದ್ರ ಸರ್ಕಾರ ಶೇ.90ರಷ್ಟು ರಾಜ್ಯ ಸರ್ಕಾರ ಶೇ.10ರಷ್ಟು ಭರಿಸುತ್ತಿತ್ತು. ಈಗ ಶೇ. 40ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದೆ. ಈಗ ಪೂರಕ ಅಂದಾಜಿನಲ್ಲಿ 3800 ಕೋಟಿ ರೂ. ನೀಡಲಾಗಿದೆ ಕೇಂದ್ರ ಸರ್ಕಾರದಿಂದ 5709 ಕೋಟಿ ರೂ. ಬರಲಿದ್ದು, ಯಾರೊಬ್ಬರೂ ಗುಳೆ ಹೋಗದಂತೆ ಗ್ರಾಮೀಣ ಜನರಿಗೆ ಉದ್ಯೋಗ ನೀಡಲು ಕ್ರಮ ವಹಿಸಲಾಗಿದೆ. ಆರಂಭದಲ್ಲಿ 50ಸಾವಿರ ಮಾನವ ದಿನ ಸೃಜನೆಯಾಗಿತ್ತು. ಈಗ 3ಲಕ್ಷಕ್ಕೂ ಅಧಿಕೂ ಮಾನವ ದಿನ ಸೃಜನೆಯಾಗುತ್ತಿದೆ. ಜುಲೈ 1ರಿಂದ ಇಲ್ಲಿಯವರೆಗೆ 74ಲಕ್ಷ 77 ಸಾವಿರ ಮಾನವ ದಿನ ಸೃಜನೆಯಾಗಿದೆ. ಪ್ರತಿ ನಿತ್ಯ 5 ಲಕ್ಷ ಮಾನವ ದಿನ ನಮ್ಮ ಗುರಿಯಾಗಿದೆ ಎಂದರು.

ಹಣಕಾಸು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಹಾಯ

ಕುಡಿಯುವ ನೀರಿಗೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ 117 ಕೋಟಿ ರೂ.ಗಳನ್ನು ಮುಂಗಡವಾಗಿ ಪೂರೈಸಲಾಗಿದೆ. ಇದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು 1 ಕೋಟಿ ರೂ. ಗಳನ್ನು ಕುಡಿಯುವ ನೀರಿಗೆ ಬಿಡುಗಡೆ ಮಾಡಿದ್ದು, ಈ ಹಣವೂ ಲಭ್ಯವಿದೆ. ಕುಡಿಯುವ ನೀರು ಲಭ್ಯವಿಲ್ಲದ ಕಡೆ ಖಾಸಗಿ ಬೋರ್ ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಸಹಾಯವಾಣಿ ಎಲ್ಲ ಜಿಲ್ಲೆಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದು, ತಕ್ಷಣ ಸ್ಪಂದಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ