LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದಲ್ಲಿ ಜಮೀನು ಅಳತೆ ಕಾರ್ಯಕ್ಕೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ, ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು :   ಕರ್ನಾಟಕದಲ್ಲಿ ಜಮೀನು ಅಳತೆ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಾಲೀಕತ್ವದ ದಾಖಲೆ, ಆರ್‌ಟಿಸಿ ಹಾಗೂ ನ್ಯಾಯಾಲಯ ಅಥವಾ ಸಾರ್ವಜನಿಕ ಪ್ರಾಧಿಕಾರದ ಆದೇಶಗಳ ಆಧಾರದ ಮೇಲಷ್ಟೇ ಅಳತೆ ನಡೆಸುವಂತೆ ಸೂಚಿಸಿದೆ. ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೆ ಕೇವಲ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಅಳತೆ ನಿರಾಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

ಆದೇಶದ ಸಂಖ್ಯೆ: SSLR/13019/7/2018-PMU/SSLR

ದಿನಾಂಕ: 17.01.2018.

ಅಳತೆ ಕೆಲಸದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಕೆಳಗಿನಂತೆ ಮಾರ್ಗಸೂಚಿಯನ್ನು ಕಾನೂನಿನ ಏಕರೂಪದ ಅನುಸರಣೆಗಾಗಿ ನೀಡಲಾಗಿದೆ.

ಅಳತೆ ಕಾರ್ಯವನ್ನು ನಿರ್ವಹಿಸಲು ಸಾಮಾನ್ಯ ನಿಯಮಗಳು

1. ಮಾಲೀಕರ ಮನವಿಯ ಮೇರೆಗೆ ಮಾತ್ರ (ಆರ್‌.ಟಿ.ಸಿ. ಅಥವಾ ಮಾಲೀಕತ್ವದ ದಾಖಲೆಗಳ ಪ್ರಕಾರ) ಅಥವಾ ನಿರ್ದಿಷ್ಟ ನ್ಯಾಯಾಲಯದ ಆದೇಶದ (ಕಂದಾಯ ಅಥವಾ ನ್ಯಾಯಾಂಗ) ಆಧಾರದ ಮೇಲೆ ಅಥವಾ ಸಾರ್ವಜನಿಕ ಪ್ರಾಧಿಕಾರದ ನಿರ್ದಿಷ್ಟ ನಿರ್ದೇಶನದ ಆಧಾರದ ಮೇಲೆ ಮಾತ್ರ ಅಳತೆ ಕಾರ್ಯವನ್ನು ಕೈಗೊಳ್ಳುವುದು.

2. ಆರ್‌.ಟಿ.ಸಿ. ಅಥವಾ ಸಂಬಂಧಪಟ್ಟ ಜಮೀನಿನ ಮಾಲೀಕತ್ವದ ದಾಖಲೆಗಳಂತೆ ಮಾಲೀಕನಲ್ಲದ ಖಾಸಗಿ ವ್ಯಕ್ತಿಯಿಂದ ಅಳತೆಗೆ ಕೋರಿಕೆ ಬಂದಲ್ಲಿ ಅಳತೆ ಕಾರ್ಯವನ್ನು ನಿರ್ವಹಿಸಬಾರದು. ಇಂತಹ ಸಂದರ್ಭದಲ್ಲಿ ನ್ಯಾಯಾಲಯ ಅಥವಾ ಸೂಕ್ತವಾದ ಸಾರ್ವಜನಿಕ ಪ್ರಾಧಿಕಾರದ ಅಳತೆ ಕಾರ್ಯ ಮಾಡಲು ನಿರ್ದಿಷ್ಟ ನಿರ್ದೇಶನಗಳು ಬಂದಲ್ಲಿ ಮಾತ್ರ ಅಳತೆ ಕೆಲಸವನ್ನು ನಿರ್ವಹಿಸುವುದು.

3. ಕಂದಾಯ ಇಲಾಖೆಗೆ ಒಳಪಡದ ಸಾರ್ವಜನಿಕ ಪ್ರಾಧಿಕಾರದಿಂದ ಅಳತೆಗೆ ಆದೇಶ / ಕೋರಿಕೆ ಬಂದಲ್ಲಿ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇಂತಹ ಕೋರಿಕೆಯನ್ನು ಕಳುಹಿಸುವುದು. ಜಿಲ್ಲಾಧಿಕಾರಿಗಳು ಜೆಡಿಎಲ್‌ಆರ್‌/ಡಿಡಿಎಲ್‌ಆರ್‌ ರವರ ಮೂಲಕ ಅಳತೆಯ ಬಗ್ಗೆ ನಿರ್ಧರಿಸಿ, ಅಳತೆ ಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಆದೇಶ ಮಾಡುವುದು.

4. ಬಹುಮಾಲೀಕತ್ವದ ಆರ್‌.ಟಿ.ಸಿ ಗಳಲ್ಲಿ (ಆರ್‌.ಟಿ.ಸಿ ಯ ಕಾಲಂ 9 ರಲ್ಲಿ ಅನೇಕ ಮಾಲೀಕರ ಹೆಸರಿನ ಏಕೈಕ ಆರ್‌.ಟಿ.ಸಿ ಆದರೆ ಪ್ರತಿ ಮಾಲೀಕರ ವಿಸ್ತೀರ್ಣವನ್ನು ಅವರ ಹೆಸರಿನ ಮುಂದೆ ನಮೂದಿರುತ್ತದೆ) ಯಾರಾದರೂ ಒಬ್ಬ ಮಾಲೀಕರು ಅರ್ಜಿ ಸಲ್ಲಿಸಿದ್ದರೂ (ಇದಕ್ಕೆ ಉಳಿದ ಮಾಲೀಕರು ಅಳತೆಗೆ ವಿರೋಧಿಸಿದರೂ ಸಹ) ಅವರ ಪಾಲಿನ ಭಾಗದ ಅಳತೆ ಕಾರ್ಯವನ್ನು ನಿರ್ವಹಿಸುವುದು.

ಜಂಟಿ ಮಾಲೀಕತ್ವದ ಆರ್‌.ಟಿ.ಸಿಯಲ್ಲಿ (ಆರ್‌.ಟಿ.ಸಿಯ 9ನೇ ಕಾಲಂನಲ್ಲಿ ಒಂದಕ್ಕಿಂತ ಹೆಚ್ಚು ಮಾಲೀಕರ ಹೆಸರು ನಮೂದಿಸಿದ್ದು, ವಿಸ್ತೀರ್ಣವನ್ನು ಅವರ ಹೆಸರಿನ ಮುಂದೆ ನಮೂದಿಸದೆ ಜಂಟಿಯಾಗಿ ನಮೂದಿಸಿರುವುದು) ಎಲ್ಲಾ ಜಂಟಿ ಮಾಲೀಕರ ಕೋರಿಕೆ ಇದ್ದಲ್ಲಿ ಮಾತ್ರ ಅಳತೆ ಕಾರ್ಯ ನಿರ್ವಹಿಸುವುದು. ಆದರೆ, ನ್ಯಾಯಾಲಯ ಅಥವಾ ಸಾರ್ವಜನಿಕ ಪ್ರಾಧಿಕಾರದ ನಿರ್ದಿಷ್ಟ ಆದೇಶವಿದ್ದಲ್ಲಿ, ಆದೇಶದಂತೆ ಅಳತೆ ಕೆಲಸ ನಿರ್ವಹಿಸುವುದು.

5. ಸಕ್ಷಮ ನ್ಯಾಯಾಲಯವು “ಅಳತೆ ಕಾರ್ಯವನ್ನು ಮಾಡಬಾರದು” ಎಂದು ಸ್ಪಷ್ಟವಾದ ತಡೆಯಾಜ್ಞೆ ನೀಡಿದ್ದಲ್ಲಿ ಮಾತ್ರ ಅಳತೆ ಕಾರ್ಯವನ್ನು ನಿರ್ವಹಿಸಬಾರದು. ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇರುವ ಕಾರಣಕ್ಕೆ ಆರ್‌.ಟಿ.ಸಿ ಮಾಲೀಕರ ಕೋರಿಕೆಯಂತೆ ಅಳತೆ ಕಾರ್ಯವನ್ನು ನಿರಾಕರಿಸುವಂತಿಲ್ಲ.

ಅಳತೆಯನ್ನು ತಡೆಯಲು ಯಾರಾದರೂ ಯತ್ನಿಸಿದಾಗ ಸಕ್ಷಮ ನ್ಯಾಯಾಲಯದಿಂದ ಅಳತೆ ಮಾಡಬಾರದೆಂದು ಸ್ಪಷ್ಟವಾದ ತಡೆಯಾಜ್ಞೆಯ ಆದೇಶವನ್ನು ಪಡೆಯುವುದು. ಅಳತೆ ಮಾಡಬಾರದೆಂದು ಸ್ಪಷ್ಟವಾದ ತಡೆಯಾಜ್ಞೆ ಇಲ್ಲದಿದ್ದಲ್ಲಿ ಅಳತೆ ಕೆಲಸವನ್ನು ಆರ್‌.ಟಿ.ಸಿ/ಭೂ ದಾಖಲೆಗಳಲ್ಲಿ ಭೂಮಾಲೀಕರ ಕೋರಿಕೆಯ ಮೇರೆಗೆ ಅಳತೆ ಕಾರ್ಯ ನಿರ್ವಹಿಸುವುದು.

6. ಜಮೀನಿನ ಕಾನೂನುಬದ್ಧ ಮಾಲೀಕರ ಕೋರಿಕೆಯ ಮೇರೆಗೆ ಅಳತೆ ಕೆಲಸ ನಿರ್ವಹಿಸುವ ಸಮಯದಲ್ಲಿ ಜಮೀನಿನ ಮಾಲೀಕತ್ವದ ಆರ್‌.ಟಿ.ಸಿ / ಅಧಿಕೃತ ದಾಖಲೆಯಂತೆ, ಕಾನೂನಿನನ್ವಯ ಹಕ್ಕು ಮತ್ತು ಮಾಲೀಕತ್ವದ ವಿಸ್ತೀರ್ಣ ಮೀರದಂತೆ ಸ್ಕೆಚ್‌ನಲ್ಲಿ ತೋರಿಸಿ ನಮೂದಿಸುವುದು. (ಅನುಭವದ ವಿಸ್ತೀರ್ಣವು ಹಕ್ಕಿನ ಮಾಲೀಕತ್ವಕ್ಕಿಂತ ಕಡಿಮೆ ಇದ್ದಲ್ಲಿ ಕಂಡಿಕೆ (8) ರಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು.)

7. ಜಮೀನಿನಲ್ಲಿ ಯಾವುದೇ ವ್ಯಕ್ತಿಗೆ ಅಥವಾ ಸಂಸ್ಥೆಗೆ ಕಾನೂನಿನ್ವಯ ನೈಜ ಮಾಲೀಕತ್ವವಿಲ್ಲದಿದ್ದಲ್ಲಿ ಅಥವಾ ಸದರಿ ಜಮೀನಿನಲ್ಲಿ ಹಕ್ಕಿಲ್ಲದೇ ಸ್ವಾಧೀನಪಡಿಸಿಕೊಂಡಿದ್ದಲ್ಲಿ ಅಳತೆ ಕೆಲಸ ನಿರ್ವಹಿಸಬಾರದು ಹಾಗೂ ಅನುಭವ ತೋರಿಸಬಾರದು. ಆದರೆ, ಜಮೀನಿನ ಮಾಲೀಕರು ಅಥವಾ ಸಾರ್ವಜನಿಕ ಪ್ರಾಧಿಕಾರದ ಕೋರಿಕೆಯ ಮೇರೆಗೆ ಅಥವಾ ನ್ಯಾಯಾಲಯದ ಆದೇಶವಿದ್ದಲ್ಲಿ ಮಾತ್ರ ಸದರಿ ಜಮೀನಿನ ಅಳತೆ ಕೆಲಸವನ್ನು ನಿರ್ವಹಿಸುವುದು.

ಇಂತಹ ಅಳತೆ ಸಮಯದಲ್ಲಿ ಮಾಲೀಕರನ್ನು ಬಿಟ್ಟು ಬೇರೆಯವರು ಸ್ವಾಧೀನದಲ್ಲಿದ್ದಲ್ಲಿ ಅನಧಿಕೃತ ಒತ್ತುವರಿ ಎಂಬುದಾಗಿ ತೋರಿಸಬೇಕು (ಸರ್ಕಾರಿ ಅಥವಾ ಖಾಸಗಿ ಜಮೀನು ಒಳಗೊಂಡಂತೆ). ಪ್ರತಿಕೂಲ ಅನುಭವವನ್ನು (Adverse possession) ನಿರ್ಣಯಿಸಲು ಸಕ್ಷಮ ಸಿವಿಲ್‌ ನ್ಯಾಯಾಲಯದಲ್ಲಿ ನಿರ್ಧಾರವಾಗಬೇಕಾಗುತ್ತದೆ. ಮತ್ತು ಸರ್ವೆ ಇಲಾಖೆಯು ಕೇವಲ ಭೌತಿಕ ಅನುಭವದ ಆಧಾರದ ಮೇಲೆ ಮಾಲೀಕತ್ವ ಅಥವಾ ಹಕ್ಕನ್ನು ನಿರ್ಣಯಿಸಲು ಬರುವುದಿಲ್ಲ.

8. ಉದಾಹರಣೆಗೆ, ಮಾಲೀಕರಾದ ‘ಎ’ ಯು ಸರ್ವೆ ನಂಬರ್‌ 23 ರಲ್ಲಿ 3-00 ಎಕರೆ ವಿಸ್ತೀರ್ಣಕ್ಕೆ ಮಾಲೀಕತ್ವವಿದ್ದು, ಜಮೀನು ಸ್ಥಿತಿಯಂತೆ 2 ಎಕರೆ 20 ಗುಂಟೆ ಅನುಭವದಲ್ಲಿರುತ್ತಾರೆ ಹಾಗೂ 0-20 ಗುಂಟೆ ಪಕ್ಕದ ಸರ್ವೆ ನಂಬರ್‌ 24 ರಲ್ಲಿ ಅನುಭವದಲ್ಲಿರುತ್ತಾರೆ. ಆಗ ಸರ್ವೆ ನಂಬರ್‌ 23 ರಲ್ಲಿ 2-20 ಗುಂಟೆ ಯನ್ನು ಅನುಭವದಲ್ಲಿರುವುದಾಗಿ ಸ್ಕೆಚ್‌ನಲ್ಲಿ ತೋರಿಸಬೇಕು.

ಸದರಿಯವರ ಸರ್ವೆ ನಂಬರ್‌ 24 ರಲ್ಲಿ 0-20 ಗುಂಟೆ ಅನುಭವ ಇರುವ ಬಗ್ಗೆ ಅಳತೆ ಮಾಡಬಾರದು ಹಾಗೂ ಸ್ಕೆಚ್‌ ತಯಾರಿಸಬಾರದು. ಆದರೆ, ಸರ್ವೆ ನಂಬರ್‌ 24 ರ ಮಾಲೀಕರು ಲಿಖಿತವಾಗಿ ಕೋರಿದ್ದಲ್ಲಿ ಅಥವಾ ಕೋರ್ಟ್‌ ಅಥವಾ ಸಾರ್ವಜನಿಕ ಪ್ರಾಧಿಕಾರದಿಂದ ಅಳತೆಗೆ ಕೋರಿಕೆ ಬಂದಲ್ಲಿ ‘ಎ’ ಯು ಸರ್ವೆ ನಂಬರ್‌ 24 ರಲ್ಲಿ 0-20 ಗುಂಟೆ ಅನಧಿಕೃತ ಸ್ವಾಧೀನದಲ್ಲಿರುವುದಾಗಿ ತೋರಿಸಬೇಕು.

ಇದಲ್ಲದೆ ಮತ್ತೊಬ್ಬ ವ್ಯಕ್ತಿ “ಸಿ” ಯು ಸರ್ವೆ ನಂಬರ್‌ 23 ರಲ್ಲಿ “ಎ” ಮಾಲೀಕತ್ವದ 0-20 ಗುಂಟೆ ಪ್ರದೇಶದ ಅನುಭವದಲ್ಲಿದ್ದರೆ “ಎ” ಕೋರಿಕೆ ಸಲ್ಲಿಸಿದ್ದಲ್ಲಿ ಮಾತ್ರ “ಸಿ” ಯ ಅನಧಿಕೃತ ಅನುಭವದ ಬಗ್ಗೆ ಸ್ಕೆಚ್‌/ನಕ್ಷೆಯಲ್ಲಿ ತೋರಿಸುವುದು. ಇಲ್ಲದಿದ್ದಲ್ಲಿ ತೋರಿಸಬಾರದು.

ಇದು ಹಿಸ್ಸಾ ಸರ್ವೆ ಟಿಪ್ಪಣಿಗಳು ಹಾಗೂ ಹಿಸ್ಸಾ ಸರ್ವೆ ನಂಬರುಗಳಲ್ಲಿ ಪೋಡಿಗೆ ಬಾಕಿ ಇರುವ ಅಥವಾ ಬಾಕಿ ಇರುವ ಹದ್ದುಬಸ್ತು ಪ್ರಕರಣಗಳಿಗೂ ಅನ್ವಯಿಸುತ್ತದೆ.

9. ಪೈಕಿ ಆರ್‌.ಟಿ.ಸಿಗಳಿದ್ದು ತತ್ಸಂಬಂಧ ಆಕಾರಬಂದ್‌ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮಾಲೀಕರ ಕೋರಿಕೆಯಿದ್ದರೂ ಸಹ 1ಇ / ಪೋಡಿ / ಅಳತೆ ಕೆಲಸ ನಿರ್ವಹಿಸಬಾರದು ಹಾಗೂ ಪ್ರಕರಣವನ್ನು ಆರ್‌.ಟಿ.ಸಿ ತಿದ್ದುಪಡಿಗೆ ತಹಸೀಲ್ದಾರ್‌/ ಉಪ ವಿಭಾಗಾಧಿಕಾರಿ ರವರಿಗೆ ಕಳುಹಿಸಿ ಮೋಜಿಣಿಯಲ್ಲಿ ಪ್ರಕರಣವನ್ನು ವಿಲೇಪಡಿಸಿಕೊಳ್ಳುವುದು.

ಇದಕ್ಕೆ ಸಂಬಂಧಿಸಿದಂತೆ ಮೋಜಿಣಿ ತಂತ್ರಾಂಶವನ್ನು ಬದಲಾವಣೆ ಮಾಡಲಾಗುತ್ತಿದೆ. ಪೈಕಿ ಆರ್‌.ಟಿ.ಸಿ.ಯನ್ನು ಮೂಲ ಆರ್‌.ಟಿ.ಸಿ.ಯೊಂದಿಗೆ ಒಟ್ಟುಗೂಡಿಸಿದ ನಂತರ ಖಾಸಗಿ ಸರ್ವೆ ನಂಬರ್‌ಗಳಿಗೆ ಪೋಡಿ/1ಇ/ಹದ್ದುಬಸ್ತನ್ನು ನಿಯಮಾನುಸಾರ ಕೈಗೊಳ್ಳಬಹುದು.

ಒಂದು ವೇಳೆ ಒಟ್ಟುಗೂಡಿಸಿದ ಸರ್ವೆ ನಂಬರ್‌ ಸರ್ಕಾರಿ ಸರ್ವೆ ನಂಬರ್‌ ಆಗಿದ್ದಲ್ಲಿ ಸುತ್ತೋಲೆಯನ್ವಯ ನಮೂನೆ 1 ರಿಂದ 10 ನ್ನು ಭರ್ತಿ ಮಾಡಿ ಪೋಡಿ/1ಇ/ಹದ್ದುಬಸ್ತನ್ನು ಕೈಗೊಳ್ಳಬಹುದು.

(ಮುನಿಷ್‌ ಮಾದಪ್ಪ, ಎ.ಎಸ್.ಎಸ್.)
ಆಯುಕ್ತರು,
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು
ಭೂದಾಖಲೆಗಳ ಇಲಾಖೆ, ಬೆಂಗಳೂರು

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!