ಬೆಂಗಳೂರು: ಲುಫ್ತಾನ್ಸಾ ಟೆಕ್ನಿಕ್ ಕಂಪನಿಯು ಬೆಂಗಳೂರಿನಲ್ಲಿ ವಿಮಾನಗಳ ನಿರ್ವಹಣೆ, ರಿಪೇರಿ ಮತ್ತು ನವೀಕರಣ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಲುಫ್ತಾನ್ಸಾ ಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಸೆಲ್ ಪಾಸ್ಟೂಸ್ಕ ನೇತೃತ್ವದ ಬುಧವಾರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಕರ್ನಾಟಕದತ್ತ ಲುಫ್ತಾನ್ಸಾ ಟೆಕ್ನಿಕ್ ನ ಚಿತ್ತ. ಜಾಗತಿಕ ವಿಮಾನಯಾನ, MRO ಹಾಗೂ ತಾಂತ್ರಿಕ ಸೇವೆಗಳ ಮುಂಚೂಣಿ ಸಂಸ್ಥೆಯಾದ Lufthansa Technik, ತನ್ನ ವಿಸ್ತರಣೆಯ ಮುಂದಿನ ಹಂತಕ್ಕಾಗಿ ಭಾರತವನ್ನು ಪರಿಗಣಿಸುತ್ತಿದ್ದು, ಪ್ರಮುಖ ಸಂಭಾವ್ಯ ತಾಣವಾಗಿ ಕರ್ನಾಟಕದತ್ತವೂ ಗಮನ ಹರಿಸಿರುವುದು ಸಂತಸದ ಸಂಗತಿಯಾಗಿದೆ.
ಸಂಸ್ಥೆಯ ಹಿರಿಯ ಜಾಗತಿಕ ನಿಯೋಗವು ನನ್ನನ್ನು ಭೇಟಿ ಮಾಡಿ, ಸಂಸ್ಥೆಯ ವಿಸ್ತರಣಾ ಯೋಜನೆಗಳು ಹಾಗೂ ಕರ್ನಾಟಕದಲ್ಲಿ ಹೂಡಿಕೆಯ ಸಾಧ್ಯತೆಗಳ ಕುರಿತು ಮಹತ್ವದ ಮಾತುಕತೆ ನಡೆಸಿತು. ಬೆಂಗಳೂರಿನ ಜರ್ಮನ್ ಉಪ ಕಾನ್ಸುಲ್ ಜನರಲ್ ಅನೆಟ್ ಬೇಸ್ಲರ್ ಅವರೂ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ಬಲಿಷ್ಠ ಏರೋಸ್ಪೇಸ್ & ಡಿಫೆನ್ಸ್ ಪರಿಸರ ವ್ಯವಸ್ಥೆ, ವಿಶ್ವದರ್ಜೆಯ ಎಂಜಿನಿಯರಿಂಗ್ ಮತ್ತು R&D ಪ್ರತಿಭೆ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಅಭಿವೃದ್ಧಿ ಹೊಂದಿರುವ ವಿಮಾನಯಾನ ಪೂರೈಕೆ ಸರಪಳಿ, ಬಲಿಷ್ಠ MRO ಸಾಮರ್ಥ್ಯ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜಾಗತಿಕ ಸಂಪರ್ಕ ಜಾಲ ಸಂಸ್ಥೆಯ ಗಮನ ಸೆಳೆದಿವೆ. ಜಾಗತಿಕ ಏರೋಸ್ಪೇಸ್ ನಕ್ಷೆಯಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೇರಿಸುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇದಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.