ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ CWRC, CWMA ಆದೇಶ ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದ್ದು, ಕಾವೇರಿ ನದಿ ನೀರಿನ ವಿಚಾರವಾಗಿ ಕರೆ ನೀಡಿರುವ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಇಂದು ಬಂದ್ ಗೆ ಕರೆ ನೀಡಿದ್ದರೂ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಇದೆ. ಸಾರಿಗೆ ಬಸ್ ಗಳು ಸೇರಿದಂತೆ ವಾಹನಗಳ ಸಂಚಾರ, ಅಂಗಡಿ ಮುಗಟ್ಟುಗಳಲ್ಲಿ ವ್ಯಾಪಾರ ಎಂದಿನಂತೆ ಇದೆ.
ಮಂಡ್ಯದಲ್ಲಿ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳು, ಕಚೇರಿ ಕೆಲಸ ಕಾರ್ಯಗಳು ಎಂದಿನಂತೆ ನಡೆಯಲಿವೆ. ವಾಹನಗಳ ಸಂಚಾರ ಕೂಡ ಎಂದಿನಂತೆ ಇದ್ದು, ಬಂದ್ ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಕರ್ನಾಟಕ ಬಂದ್ ಪ್ರತಿಭಟನೆಗೆ ಸೀಮಿತವಾಗಲಿದೆ ಎನ್ನಲಾಗಿದೆ.