ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಅವಹೇಳನಕಾರಿ, ನಿಂದನಾತ್ಮಕ ಸಂದೇಶ ಹಂಚಿಕೊಂಡ ಆರೋಪದ ಮೇಲೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಅಮಾನತು ಆದೇಶ ಹೊರಡಿಸಿದ್ದಾರೆ.
ಸಚಿವರಾಗಿ ವಿಜಯಾನಂದ ಕಾಶಪ್ಪನವರ ಪ್ರಮಾಣವಚನ ಸ್ವೀಕರಿಸುವ ಫೋಟೋ ಬಳಸಿಕೊಂಡು ಸಚಿವರಿಗೆ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಎಂದು ನಿಂದನಾತ್ಮಕ, ಅವಹೇಳನಕಾರಿ ಸಂದೇಶಗಳನ್ನು ಶಿಕ್ಷಕ ಆನಂದ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಹಿರೇಮಸಳಿ ಗ್ರಾಮಸ್ಥರು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಿ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಡಿಡಿಪಿಐ ಅಮಾನತು ಮಾಡಿದ್ದಾರೆ.