ಬೆಂಗಳೂರು: ಸರ್ಕಾರಿ ನೌಕರರ ಆಸ್ತಿ ಘೋಷಣೆ ಕಡ್ಡಾಯ ಮಾಡಲಾಗಿದೆ. ಈ ಕುರಿತಾಗಿ ಪ್ರಜಾ ಸೇವಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಅಖಿಲ ಭಾರತ ನಾಗರಿಕ ಸೇವೆ ಅಧಿಕಾರಿಗಳ ಮಾದರಿಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ವಿವರವನ್ನು ಆನ್ಲೈನ್ ನಲ್ಲಿ ದಾಖಲಿಸುವಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ. ಇ- ಫಾರ್ ಅಪ್ಲಿಕೇಶನ್ ನಲ್ಲಿ ಐಪಿಆರ್ ಮಾಡ್ಯೂಲ್ ಅಳವಡಿಸಲಾಗಿದೆ. 2025 -26 ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರವನ್ನು ಆಗಸ್ಟ್ 20 ರಿಂದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಅಪ್ಲೋಡ್ ಮಾಡಬೇಕು. ಮುಂದಿನ ವರ್ಷದ ಪ್ರತಿ ಮಾರ್ಚ್ ಅಂತ್ಯಕ್ಕೆ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಘೋಷಿಸುವುದು ಕಡ್ಡಾಯ ಎಂದು ಪ್ರಜಾ ಸೇವಾ ಇಲಾಖೆ ಆದೇಶ ಹೊರಡಿಸಿದೆ.
ಸಚಿವಾಲಯಕ್ಕೆ ಸೇರಿದ ಸಿಬ್ಬಂದಿ ತಮ್ಮ ಮತ್ತು ಕುಟುಂಬದ ಆಸ್ತಿಯ ಮಾಹಿತಿಯನ್ನು ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಸಲ್ಲಿಸುತ್ತಿದ್ದರು. 2025ರ ಡಿಸೆಂಬರ್ ನಲ್ಲಿ ಇ-ಫಾರ್ ಅಪ್ಲಿಕೇಶನ್ ವಿಂಡೋದಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಸಲ್ಲಿಸುವ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿತ್ತು. ಇದೀಗ ಎನ್ಐಸಿ ಅಧಿಕಾರಿಗಳು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಕಂದಾಯ ಇಲಾಖೆಯ ತಹಶೀಲ್ದಾರ್ ಆಸ್ತಿ ಮತ್ತು ಹೊಣೆಗಾರಿಕೆಯನ್ನು ಆನ್ಲೈನ್ ಮೂಲಕ ದಾಖಲಿಸುವಂತೆ ಸೂಚಿಸಲಾಗಿದೆ.