ಬೆಂಗಳೂರು: ಬಂಡೀಪುರ, ನಾಗರಹೊಳೆ ಪ್ರವಾಸಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿಯ ಅನ್ವಯ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ ಪುನಾರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಹಿಂದೆ ತಾಂತ್ರಿಕ ಸಮಿತಿ ವರದಿ ಸಲ್ಲಿಸಿದ್ದು, ಇದನ್ನು ಅಂಗೀಕರಿಸಿದ ಸರ್ಕಾರ ವೈಜ್ಞಾನಿಕ ಮೌಲ್ಯಮಾಪನ ಬಳಿಕ ಪರಿಣಾಮಕಾರಿ ಸಾಗಣೆ ಸಾಮರ್ಥ್ಯದ ಆಧಾರದ ಮೇಲೆ ಜಂಗಲ್ ಸಫಾರಿಗೆ ಹಸಿರು ನಿಶಾನೆ ತೋರಿಸಲು ಮುಂದಾಗಿದೆ.
ತಜ್ಞರು, ಅಧಿಕಾರಿಗಳ ಸಮಿತಿ ಶಿಫಾರಸಿನ ಪ್ರಕಾರ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸಲು ಸೂಚನೆ ನೀಡಲಾಗಿದೆ. ಕರ್ನಾಟಕ ಸದಾ ಸುಸ್ಥಿರ ಪ್ರವಾಸೋದ್ಯಮ ಮಾದರಿ ಪಾಲಿಸಿಕೊಂಡು ಬಂದಿದೆ. ಇದರಿಂದ ಸ್ಥಳೀಯ ಉದ್ಯೋಗ, ಜೀವನೋಪಾಯ ಅವಕಾಶಗಳು ಸೃಷ್ಟಿಗೆ ಸಹಾಯವಾಗಿದ್ದು, ಸ್ಥಳೀಯ ಆರ್ಥಿಕತೆ ಉತ್ತೇಜಿಸಲು ನೆರವಾಗುತ್ತದೆ ಎಂದು ಸಿಎಂ ಕಚೇರಿ ತಿಳಿಸಿದ್ದು, ಶೀಘ್ರವೇ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ ಮತ್ತೆ ಶುರುವಾಗಲಿದೆ ಎಂದು ಹೇಳಲಾಗಿದೆ.