ಧಾರವಾಡ: 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ಜಿಲ್ಲೆಯ ರೈತರಿಗೆ ಸರ್ಕಾರವು ಘೋಷಿಸಿದೆ.
ಹಸಿಮೆಣಸಿನಕಾಯಿ ಬೆಳೆಗೆ ಧಾರವಾಡ, ಅಮ್ಮಿನಬಾವಿ, ಗರಗ, ಧುಮ್ಮವಾಡ ಹಾಗೂ ಛಬ್ಬಿ ಹೋಬಳಿಗಳ ಆಯ್ದ ಗ್ರಾಮ ಪಂಚಾಯತಗಳು ಹಾಗೂ ಮಾವು ಬೆಳೆಗೆ ಅಮ್ಮಿನಭಾವಿ, ಧಾರವಾಡ, ಗರಗ, ಅಳ್ನಾವರ, ಹುಬ್ಬಳ್ಳಿ, ಛಬ್ಬಿ, ಕಲಘಟಗಿ, ತ.ಹೊನ್ನಳ್ಳಿ, ದುಮ್ಮವಾಡ, ಕುಂದಗೋಳ ಹಾಗೂ ಸಂಶಿ ಹೋಬಳಿಗಳ ಆಯ್ದ ಗ್ರಾಮ ಪಂಚಾಯತಗಳನ್ನು ಈ ವಿಮೆ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಧಾರವಾಡ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯು ಆಯ್ಕೆಯಾಗಿದ್ದು, ವಿಮೆ ಕಂತಿಗೆ ಸಂಬಂಧಪಟ್ಟಂತೆ ಹಸಿಮೆಣಸಿನಕಾಯಿ ಬೆಳೆಗೆ ರೂ. 6745 ಪ್ರತಿ ಹೆಕ್ಟೇರ್‍ಗೆ ಹಾಗೂ ಮಾವು ಬೆಳೆಗೆ ರೂ. 4000 ಪ್ರತಿ ಹೆಕ್ಟೇರ್‍ಗೆ ರೈತರು ತಮ್ಮ ವಿಮೆ ಕಂತಿನ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ. ವಿಮಾ ಕಂತನ್ನು ಅಗಸ್ಟ್ 31, 2026 ರೊಳಗೆ ಪಾವತಿಸಬೇಕು. ಸದರಿ ಯೋಜನೆ ಅಡಿ ನೋದಾಯಿಸಿಕೊಳ್ಳಲು ಫ್ರೂಟ್ಸ್ ಐಡಿ ಹೊಂದಿರಬೇಕು.
ಯೋಜನೆಯ ಸದುಪಯೋಗ ಪಡೆಯಲು ರೈತರು ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‍ಸಿ)ಗಳಿಗೆ ಭೇಟಿ ನೀಡಿ, ರೈತರು ಯೋಜನೆಯ ಸದುಪಯೋಗ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಹಾಗೂ ಕುಂದಗೊಳ ತಾಲೂಕುಗಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್ ಅಥವಾ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಹಾಗೂ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ (ಜಿಲ್ಲಾ ಸಂಯೋಜಕರು-ಅನುಷಾ ಎ. ಆರ್. 7411292116 ಹಾಗೂ ಸಹಾಯವಾಣಿ ಸಂ:18004250505) ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.