ಬೆಂಗಳೂರು: ಮಳೆ ಕೊರತೆಯಿಂದ ರಾಜಧಾನಿ ಬೆಂಗಳೂರಿಗೆ ಎದುರಾಗಬಹುದಾದ ನೀರಿನ ಸಮಸ್ಯೆ ಎದುರಿಸಲು ಕಬಿನಿ ಮತ್ತು ಹೇಮಾವತಿ ಜಲಾಶಯಗಳಿಂದ ನಗರಕ್ಕೆ ನೀರು ತರುವ ಸಾಧ್ಯತೆಗಳ ಯೋಜನೆ ಸಿದ್ದಪಡಿಸಿಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ಮಂಜುಳಾ ಎಂಜಿನಿಯರ್ ಗಳಿಗೆ ಸೂಚನೆ ನೀಡಿದ್ದಾರೆ.
ವಲಯವಾರು ಮುಖ್ಯ ಎಂಜಿನಿಯರ್ ಗಳ ಜೊತೆಗೆ ಮಂಗಳವಾರ ಅವರು ಸಭೆ ನಡೆಸಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೆ.ಆರ್.ಎಸ್. ಜಲಾಶಯದಲ್ಲಿ ಸದ್ಯಕ್ಕೆ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಅದನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕಿರುವ ಕ್ರಮ, ನೀರಿನ ಕೊರತೆ ಮತ್ತಷ್ಟು ಹೆಚ್ಚಾದರೆ ನಗರಕ್ಕೆ ಪೂರೈಕೆ ಮಾಡುವ ದೈನಂದಿನ ನೀರಿನ ಪ್ರಮಾಣದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಪರ್ಯಾಯ ವ್ಯವಸ್ಥೆಯಾಗಿ ಕಬಿನಿ ಮತ್ತು ಹೇಮಾವತಿ ಜಲಾಶಯಗಳಿಂದ ನಗರಕ್ಕೆ ನೀರು ಸರಬರಾಜು ಮಾಡುವ ಸಾಧ್ಯತೆಗಳ ಬಗ್ಗೆ ಅಧ್ಯಕ್ಷರಾದ ಮಂಜುಳಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ನಗರದ ಅಂತರ್ಜಲ ಮಟ್ಟ, ಪ್ರಸ್ತುತ ಬಳಕೆಯಲ್ಲಿರುವ ಕೊಳವೆ ಬಾವಿಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಸಮುದ್ರ ವರದಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.