ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ತಡೆಗೆ ಸರ್ಕಾರ ಮುಂದಾಗಿದ್ದು, ಮತ್ತೊಮ್ಮೆ ಎಲ್ಲಾ ಫಲಾನುಭವಿಗಳು ಅರ್ಜಿ ಸಲ್ಲಿಸಲು ಮಾರ್ಗಸೂಚಿ ಸಿದ್ದಪಡಿಸುತ್ತಿದೆ.
ಇನ್ನು ಎರಡರಿಂದ ಮೂರು ದಿನಗಳಲ್ಲಿ ಮಾರ್ಗಸೂಚಿಯ ಅಂತಿಮಗೊಳಿಸಲಾಗುವುದು. ಮೃತಪಟ್ಟವರು, ಐಟಿ/ಜಿಎಸ್‌ಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಂಡಿದೆ.
ಅನಕ್ಷರಸ್ಥರು ಸೇರಿದಂತೆ ಅರ್ಜಿ ಸಲ್ಲಿಸಲು ಬಾರದವರಿಗೆ ಸಹಾಯ ಮಾಡಲು ಅಂಗನವಾಡಿ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗುವುದು. ಅಂಗನವಾಡಿ ಸಿಬ್ಬಂದಿಯ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಆ್ಯಪ್ ಇನ್ಸ್ಟಾಲ್ ಮಾಡಲಿದ್ದು, ಈ ಆ್ಯಪ್ ಮೂಲಕ ಅನಕ್ಷರಸ್ಥರು, ಬಡವರು ಅರ್ಜಿ ಸಲ್ಲಿಸಬಹುದು. ಅಲ್ಲದೇ, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಸೇವಾ ಕೇಂದ್ರಗಳಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಅರ್ಜಿ ಸ್ವೀಕರಿಸುವ ವೇಳೆ ಫೇಸ್ ರೆಕಗ್ನಿಶನ್, ಬಯೋಮೆಟ್ರಿಕ್ ಸಂಗ್ರಹಿಸಲಾಗುವುದು. ಅರ್ಜಿ ಸಲ್ಲಿಸುವ ಫಲಾನುಭವಿಗಳು ರಾಜ್ಯದಲ್ಲಿರುವ ಬ್ಯಾಂಕ್ ಖಾತೆ ನೀಡಬೇಕು. ಯೋಜನೆಗೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರು ಅರ್ಹರಾಗಿದ್ದು, ಐಟಿ/ಜಿಎಸ್‌ಟಿ ಪಾವತಿದಾರರು ಅರ್ಹರಾಗಿರುವುದಿಲ್ಲ ಎಂದು ಹೇಳಲಾಗಿದೆ.