ದಾವಣಗೆರೆ: ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಚ್ಚುತ್ತಿದ್ದಂತೆ ಭೀಕರ ಸ್ಫೋಟಗೊಂಡು ಸಾಕುನಾಯಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದಲ್ಲಿ ನಡೆದಿದೆ.
ಅರೆಕೇರೆ ರುದ್ರೇಶ್ ಎನ್ನುವವರಿಗೆ ಸೇರಿದ ಸಾಅಕುನಾಯಿ ಮೃತಪಟ್ಟಿದೆ. ರುದ್ರೇಶ್ ಅವರು ಜಮೀನಿನಲ್ಲಿ ದನ ಮೇಯಿಸಲು ಹೋಗುತ್ತಿದ್ದಾಗ ನಾಯಿ ಸಹ ಅವರ ಜೊತೆಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಬದಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಕಂಡ ನಾಯಿ ಅದನ್ನು ಬಾಯಿಯಿಂದ ಕಚ್ಚಿದೆ. ಕ್ಷಣಾರ್ಧದಲ್ಲಿ ಕವರ್ ಸ್ಫೋಟಗೊಂಡಿದ್ದು, ನಾಯಿಯ ಮುಖ ಛಿದ್ರವಾಗಿದೆ. ಸ್ಥಳದಲ್ಲೇ ನಾಯಿ ಮೃತಪಟ್ಟಿದೆ.
ಸ್ಫೋಟದ ಸದ್ದು ಸುಮಾರು 1 ಕಿಲೋಮೀಟರ್‌ವರೆಗೆ ಕೇಳಿಸಿದ್ದು, ಇದರಿಂದ ಗ್ರಾಮಸ್ಥರು ಅತಂಕಗೊಂಡಿದ್ದಾರೆ. ಕಾಡು ಹಂದಿಗಳ ನಿಯಂತ್ರಣಕ್ಕೆ ಇಡುವ ಸಿಡಿಮದ್ದಿನ ರೀತಿ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಸ್ಫೋಟಕ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಗ್ರಾಮಸ್ಥರು ಸ್ಫೋಟಕ ವಸ್ತುವನ್ನು ಇಟ್ಟಿರುವ ಕಿಡಿಗೇಡಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.