ಕಲಬುರಗಿ: ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಗನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.
ಮುಗನೂರ ಗ್ರಾಮದ ಭದ್ರಸ್ವಾಮಿ(32), ಸದಾಶಿವಸ್ವಾಮಿ(10) ಮೃತಪಟ್ಟವರು ಎಂದು ಹೇಳಲಾಗಿದೆ. ಬಾಲಕ ಸದಾಶಿವಸ್ವಾಮಿ ಚಿಕ್ಕಪ್ಪ ಭದ್ರಸ್ವಾಮಿ ಜೊತೆಗೆ ಎಮ್ಮೆ ಮೇಯಿಸಲು ತೆರಳಿದ್ದರು. ಸಂಜೆಯಾದರೂ ಇಬ್ಬರು ವಾಪಸ್ ಮನೆಗೆ ಬಂದಿರಲಿಲ್ಲ. ಆದರೆ ಅವರ ಎಮ್ಮೆಗಳು ಗ್ರಾಮಕ್ಕೆ ಮರಳಿದ್ದರಿಂದ ಕುಟುಂಬದವರಿಗೆ ಅನುಮಾನ ಉಂಟಾಗಿದೆ.
ಗ್ರಾಮಸ್ಥರು ಮತ್ತು ಕುಟುಂಬದವರು ಹುಡುಕಾಟ ನಡೆಸಿದ್ದು, ಗ್ರಾಮದ ಹೊರವಲಯದ ಕೃಷಿಹೊಂಡ ಬಳಿ ಬಟ್ಟೆ, ಮೊಬೈಲ್ ಪತ್ತೆಯಾಗಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.