ಲೈಂಗಿಕವಾಗಿ ಸಹಕರಿಸುವಂತೆ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಶಿವಮೊಗ್ಗದ ಕೆಎಸ್ಆರ್ಪಿ ಕಾನ್ಸ್ಟೇಬಲ್ ಹನುಮಂತ ಸಿದ್ದಪ್ಪ ಕೊನಬೇವು ವಿರುದ್ಧ ದಾವಣಗೆರೆ ಜಿಲ್ಲೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಮಹಿಳೆ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೂರು ವರ್ಷಗಳಿಂದ ಇಬ್ಬರ ನಡುವೆ ಫೋನ್, ವಾಟ್ಸಾಪ್ ಮೂಲಕ ಸಂಪರ್ಕ ಇತ್ತು. ಇತ್ತೀಚೆಗೆ ಆರೋಪಿಯ ವರ್ತನೆ ಅತಿರೇಕಕ್ಕೆ ಹೋಗಿದ್ದು, ಇದರಿಂದ ಬೇಸತ್ತು ಆರೋಪಿ ಜೊತೆಗಿನ ಸಂಪರ್ಕವನ್ನು ಮಹಿಳೆ ಕಡಿತಗೊಳಿಸಿದ್ದರು. ಆರೋಪಿ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದರು. ಆದರೂ ಬೇರೆ ನಂಬರ್ ಗಳಿಂದ ಕರೆ ಮಾಡಿ ಮಹಿಳೆಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಲೈಂಗಿಕವಾಗಿ ಸಹಕರಿಸದಿದ್ದರೆ ಜೊತೆಗಿರುವ ಫೋಟೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ದೂರು ನೀಡಲಾಗಿದೆ.