ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ತೇಜಸ್ವಿ ಸೂರ್ಯ ಭಾಗವಹಿಸಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಏಕೆ ಒಂದೇ ಒಂದು ಪತ್ರಿಕಾಗೋಷ್ಟಿಯನ್ನೂ ನಡೆಸಲಿಲ್ಲ ಎಂದು ಪ್ರಶ್ನೆಯನ್ನು ಕೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಪ್ರಶ್ನೆಯೂ ಹಾಗೂ ಟೀಕೆಯೂ ಆಗಿರುವ ಇದಕ್ಕೆ ಬಿಜೆಪಿಯಿಂದ ತಕ್ಕ ಉತ್ತರ ಕೇಳಿಬಂದಿಲ್ಲ. ಇಲ್ಲಿಯೂ ಸಹ ಅದೇ ಮುಂದುವರಿದಿದ್ದು, ತೇಜಸ್ವಿ ಸೂರ್ಯ ಕೊಟ್ಟ ಉತ್ತರ ಸಹ ನೆಟ್ಟಿಗರನ್ನು ಸಮಾಧಾನಪಡಿಸಿಲ್ಲ. ಬದಲಾಗಿ ಕೇಳಿದ ಪ್ರಶ್ನೆಯೊಂದಾದರೆ ಅದಕ್ಕೆ ಕೊಟ್ಟ ಉತ್ತರ ಮತ್ತೊಂದು ಎಂದು ಕಾಲೆಳೆದಿದ್ದಾರೆ.
ವಿದ್ಯಾರ್ಥಿ ಈ ವಿಡಿಯೊವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಲವಾರು ಕಾಮೆಂಟ್‌ಗಳು ಹರಿದುಬಂದಿವೆ. ಈ ಪೈಕಿ ಬಹುತೇಕ ಕಾಮೆಂಟ್‌ಗಳು ಟೀಕೆಗಳೇ ಆಗಿವೆ.
ಇನ್ನು ವಿದ್ಯಾರ್ಥಿ ‘ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು. ಹೀಗೆ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದರೂ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಒಂದೇ ಒಂದು ಪತ್ರಿಕಾಗೋಷ್ಟಿಯನ್ನೂ ಸಹ ಏಕೆ ನಡೆಸಿಲ್ಲ. ಇದರ ಬಗ್ಗೆ ನಿಮ್ಮ ನಿಲುವೇನು?’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ‘ಸಂವಾದ ಶುರು ಮಾಡಲು ಒಳ್ಳೆಯ ಪ್ರಶ್ನೆ’ ಎಂದು ಪ್ರತಿಕ್ರಿಯೆ ನೀಡಿ ಉತ್ತರಿಸಲು ಆರಂಭಿಸಿದ ತೇಜಸ್ವಿ ಸೂರ್ಯ ‘ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ನಾವು ನಮ್ಮ ಮತದಾರರ ಜೊತೆ ದಿನದ 24 ಗಂಟೆ ಹಾಗೂ ವಾರದ ಎಲ್ಲ ದಿನವೂ ಮಾತನಾಡಲು ಅವಕಾಶವಿರುವಾಗ ಪತ್ರಿಕಾಗೋಷ್ಟಿಯು ನಾಯಕ ಹಾಗೂ ಜನರ ಮಧ್ಯೆ ಅಡ್ಡಗೋಡೆಯಾಗಲಿದೆ. ಇದು ಅನಗತ್ಯ. ಪ್ರಧಾನ ಮಂತ್ರಿ ಸಂವಹನ ನಡೆಸುತ್ತಿಲ್ಲ ಎಂದಲ್ಲ, ಪ್ರಧಾನಮಂತ್ರಿಗಳು ಪ್ರತಿದಿನ ಸಂವಹನ ನಡೆಸುತ್ತಿದ್ದಾರೆ’ ಎಂದಿದ್ದಾರೆ.
ಸದ್ಯ ಈ ವಿಡಿಯೊ ಭಾರೀ ಟ್ರೋಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದಕ್ಕೂ, ಪತ್ರಕರ್ತರ ಪ್ರಶ್ನೆಗಳನ್ನು ಧೈರ್ಯವಾಗಿ ಎದುರಿಸುವುದಕ್ಕೂ ವ್ಯತ್ಯಾಸವಿಲ್ಲವೇ? ಎಂದು ತೇಜಸ್ವಿ ಸೂರ್ಯ ಕೊಟ್ಟ ಉತ್ತರ ಕಂಡು ನಕ್ಕಿದ್ದಾರೆ.