ಧರ್ಮಸ್ಥಳದಲ್ಲಿ ಹಲವು ಮಹಿಳೆಯರ ಕೊಲೆ ನಡೆದಿದ್ದು, ಸಂತ್ರಸ್ತರ ಮೃತದೇಹಗಳನ್ನು ತಾನೇ ಹೂತಿದ್ದಾಗಿ ಹೇಳಿಕೊಂಡಿದ್ದ ಅಲ್ಲೇ ಸ್ವಚ್ಛತಾ ಕಾರ್ಮಿನಾಗಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಬಳಿಕ ತನ್ನ ದೂರಿನ ವಿರುದ್ಧವೇ ತಿರುಗಿಬಿದ್ದು, ಗಿರೀಶ್ ಮಟ್ಟಣ್ಣವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಇದಕ್ಕೆಲ್ಲ ಕಾರಣ, ಅವರು ಹೇಳಿದಂತೆ ನಾನು ನಟಿಸಿದೆ ಅಷ್ಟೆ ಎಂದು ಹೇಳಿಕೆ ನೀಡಿದ್ದ.
ಅಲ್ಲದೇ ಇತ್ತೀಚೆಗಷ್ಟೆ ಎಸ್‌ಐಟಿ ಆದಷ್ಟು ಬೇಗ ತನಿಖಾ ವರದಿಯನ್ನು ಸಲ್ಲಿಸಬೇಕು, ಅಲ್ಲದೇ ತಾನು ಕಳೆದ ವರ್ಷ ಮಟ್ಟಣ್ಣವರ್, ತಿಮರೋಡಿ ಹಾಗೂ ಕೆಲ ಯುಟ್ಯೂಬರ್‌ಗಳ ವಿರುದ್ಧ ನೀಡಿದ್ದ ದೂರನ್ನು ಪರಿಗಣಿಸಬೇಕು ಎಂದಿದ್ದ ಚಿನ್ನಯ್ಯ ಖ್ಯಾತ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿದ್ದ.
ಗಿರೀಶ್ ಮಟ್ಟಣ್ಣವರ್ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಕೊಟ್ಟಿದ್ದರು, ಆ ಸಂದರ್ಭದಲ್ಲಿ ಪ್ರಕಾಶ್ ರಾಜ್ ಗಿರೀಶ್ ಹೇಳಿದ ಹಾಗೆ ಕೇಳಿದರೆ ನಾನು ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದರು ಎಂದು ತಿಳಿಸಿದ್ದ. ಹೀಗೆ ಹೊಸ ಬಾಂಬ್ ಸಿಡಿಸಿದ್ದ ಚಿನ್ನಯ್ಯ ಇದಕ್ಕೆಲ್ಲ 200 ಕೋಟಿ ಬಜೆಟ್ ರೆಡಿ ಇದೆ ಎಂದು ತಿಮರೋಡಿ ತಿಳಿಸಿದ್ದರು ಎಂದೂ ಸಹ ಹೇಳಿಕೊಂಡಿದ್ದ.
ಹೀಗೆ ಪ್ರಕಾಶ್ ರಾಜ್ ಹೆಸರು ಧರ್ಮಸ್ಥಳಅನುಮಾನಾಸ್ಪದ ಸಾವುಗಳ ಆರೋಪದ ಪ್ರಕರಣದಲ್ಲಿ ಕೇಳುಬರುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಈ ಕುರಿತು ಸ್ವತಃ ಪ್ರತಿಕ್ರಿಯೆ ನೀಡಿದ್ದ ಪ್ರಕಾಶ್ ರಾಜ್ ಅವೆಲ್ಲ ಊಹಾಪೋಹ ಎಂದಿದ್ದರು.
ಇದೀಗ ಈ ಕುರಿತು ಪ್ರಕಾಶ್ ರಾಜ್ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮಾಧ್ಯಮಗಳಿಗೆ ಪ್ರಕರಣದ ಕುರಿತು ವಿಚಾರಗಳನ್ನು ಹಂಚಿಕೊಳ್ಳುವುದಿದೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
‘ನಮಸ್ಕಾರ ಮಾಧ್ಯಮ ಮಿತ್ರರೇ… ಧರ್ಮಸ್ಥಳ ಪ್ರಕರಣ ಹಾಗೂ ನನ್ನ ಕುರಿತಾಗಿ ಚಿನ್ನಯ್ಯ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ನಿಮ್ಮ ಜೊತೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಬೇಕಿದೆ. ದಿನಾಂಕ 17-06-2026ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೇಟಿಯಾಗೋಣ ಬನ್ನಿ. (ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ.)’ ಎಂದು ಬರೆದುಕೊಂಡು ಕೌಂಟರ್ ಕೊಟ್ಟಿದ್ದಾರೆ.