ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಿಧನರಾದ ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಮಾಜಿ ಸಿಎಂ ಸಿದ್ಧರಾಮಯ್ಯ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಇಂದಿರಾ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಕವಿತಾ ಲಂಕೇಶ್ ಹಾಗೂ ಅವರ ಕುಟುಂಬದವರು, ಪ್ರಕಾಶ್ ರಾಜ್ ಇದ್ದರು.
ಸಂತಾಪ
ಪ್ರಸಿದ್ಧ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸಾಹಿತ್ಯ, ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ಲಂಕೇಶ್ ಅವರು ಮಾಡಿರುವ ಸಾಧನೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದ ಇಂದಿರಾ ಲಂಕೇಶ್ ಅವರ ಬಹುದೊಡ್ಡ ಕೊಡುಗೆ ಇದೆ ಎನ್ನುವುದು ನಿಸ್ಸಂಶಯ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಪ್ರಾರಂಭದ ದಿನಗಳಿಂದಲೂ ಲಂಕೇಶ್ ಅವರ ಕುಟುಂಬದ ಸ್ನೇಹವಲಯದಲ್ಲಿದ್ದ ನನಗೆ ಇಂದಿರಾ ಲಂಕೇಶ್ ಮತ್ತು ಅವರ ಮಕ್ಕಳು ಆತ್ಮೀಯರು. ಸ್ವತ: ಬರವಣಿಗೆಯನ್ನೂ ಮಾಡುತ್ತಿದ್ದ ಇಂದಿರಾ ಲಂಕೇಶ್, ಪುಸ್ತಕ ಪ್ರಕಟಣೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯಷ್ಟೆ ನಡೆದ ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಇಂದಿರಾ ಲಂಕೇಶ್ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿದ್ಧರಾಮಯ್ಯ ಪ್ರಾರ್ಥಿಸಿದ್ದಾರೆ.