ದಾವಣಗೆರೆ: ರಾಜ್ಯ ರಾಜಕಾರಣದ ಹೈ-ವೋಲ್ಟೇಜ್ ಕ್ಷೇತ್ರವಾಗಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರ ನಡೆ ಈಗ ಮತ್ತೊಮ್ಮೆ ಇಡೀ ರಾಜ್ಯದ ಗಮನ ಸೆಳೆದಿದೆ. ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆ ಕ್ಷಣದಲ್ಲಿ ಪಟ್ಟ ಕೈತಪ್ಪಿದ್ದು, ಹೈಕಮಾಂಡ್ ಅಂತಿಮವಾಗಿ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದೆ.
ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಬೇಕು ಎಂಬ ಸತೀಶ್ ಜಾರಕಿಹೊಳಿ ಅವರ ಹಠವೇ ಅವರಿಗೆ ಹಿನ್ನಡೆಯಾಯಿತು ಎನ್ನಲಾಗುತ್ತಿದೆ. ಇತ್ತ ಸ್ವಂತ ಸಹೋದರನಿಗೆ ರಾಜ್ಯ ಕಾಂಗ್ರೆಸ್‌ನ ಅತ್ಯುನ್ನತ ಪಟ್ಟ ಕೈತಪ್ಪಿದ್ದಕ್ಕೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರು ದಾವಣಗೆರೆಯಲ್ಲಿಂದು ಅತ್ಯಂತ ಅಚ್ಚರಿಯ ಹಾಗೂ ಮಾರ್ಮಿಕ ಹೇಳಿಕೆ ನೀಡಿದ್ದಾರೆ
“ಅವನು ಅಧ್ಯಕ್ಷನಾಗದೇ ಇದ್ದದ್ದೇ ಒಳ್ಳೆಯದಾಯ್ತು, ದೇವರೇ ರಕ್ಷಿಸಿದ” – ಸಾಹುಕಾರ್ ಅಚ್ಚರಿ ಮಾತು
ದಾವಣಗೆರೆಯಲ್ಲಿಂದು ಮಾಧ್ಯಮಗಳೊಂದಿಗೆ ಮತ್ತು ನಾಯಕ ಸಮಾಜದ ಪ್ರಮುಖ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಬಹಿರಂಗವಾಗಿಯೇ ಸಂತಸ ವ್ಯಕ್ತಪಡಿಸಿದ್ದಾರೆ.
“ಸತೀಶ್ ಬಗ್ಗೆ ಹೇಳಬೇಕೆಂದರೆ ಅವನು ಕೆಪಿಸಿಸಿ ಅಧ್ಯಕ್ಷನಾಗಿ ಇರದೆ ಇದ್ದದ್ದೇ ಒಳ್ಳೆಯದಾಯಿತು. ಯಾಕೆಂದರೆ, ಅವನೇನಾದರೂ ಅಧ್ಯಕ್ಷನಾಗಿದ್ದರೆ ನಮ್ಮ ಸಮಾಜದವರು ನೋಡುತ್ತಿದ್ದರು.ಲಿಂಗಾಯತರು, ಒಕ್ಕಲಿಗರು, ಕುರುಬರು ಎಲ್ಲ ಮುಂದಿದ್ದಾರೆ, ನಮ್ಮ ಸಮಾಜದ ನಾಯಕ ಮಾತ್ರ ಇವರ ಸುತ್ತಾಡುತ್ತಿದ್ದಾನೆ ಅಂದುಕೊಳ್ಳುತ್ತಿದ್ದರು. ನಾಯಕ ಸಮಾಜವನ್ನು ಇಟ್ಟುಕೊಂಡು ನಮಗೆ ಸಿಗಬೇಕಾದ ರಾಜಕೀಯ ಗೌರವ ಸಿಗುತ್ತಿರಲಿಲ್ಲ. ಅದಕ್ಕೆ ದೇವರು ಒಳ್ಳೆಯದೇ ಮಾಡಿದ್ದಾನೆ, ಅವನಿಗೆ ಆ ಸ್ಥಾನ ಸಿಕ್ಕಿಲ್ಲ. ಒಂದುವೇಳೆ ಸತೀಶ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದರೆ ನಮಗೇ (ಬಿಜೆಪಿಗೆ) ತೊಂದರೆಯಾಗುತ್ತಿತ್ತು” ಎಂದು ರಮೇಶ್ ಜಾರಕಿಹೊಳಿ ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಡೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯ ಲೆಕ್ಕಾಚಾರ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ, “ರಾಜ್ಯದಲ್ಲಿ ಮುಂದಿನ 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ನಮ್ಮದೇ ತಪ್ಪಿನಿಂದ ಇವತ್ತು ಕಾಂಗ್ರೆಸ್ ಅಧಿಕಾರದಲ್ಲಿದೆ. ನಾವು ಈ ಹಿಂದೆ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡಿದ್ದರೆ ಸೋಲುತ್ತಿರಲಿಲ್ಲ. ಈಗ ಒಂದೇ ಸಮಾಜ ನಂಬಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಗಟ್ಟಿಯಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ರಮೇಶ್ ಜಾರಕಿಹೊಳಿ, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಉದ್ಯೋಗಕ್ಕೆ ಭಾರಿ ಅನ್ಯಾಯವಾಗುತ್ತಿದೆ ಎಂದು ಗುಡುಗಿದ್ದಾರೆ.
“ಯಾರೋ ಒಬ್ಬರು ಹೈಕೋರ್ಟ್‌ನಲ್ಲಿ ಸಣ್ಣ ಅರ್ಜಿ ಹಾಕಿ ಸ್ಟೇ ತಂದಿದ್ದಾರೆ. ಈ ಸರ್ಕಾರ ಬಕೆಟ್ ಹಿಡಿಯುವುದನ್ನು ಬಿಟ್ಟು ತಕ್ಷಣವೇ ನೌಕರಿಗಳನ್ನು ಭರ್ತಿ ಮಾಡಬೇಕು. ನಮ್ಮ ಸಮಾಜಕ್ಕೆ ಸಿಗಬೇಕಾದ 4% ಮೀಸಲಾತಿಯ ನೌಕರಿಗಳನ್ನು ತುಂಬಿಕೊಳ್ಳಲೇಬೇಕು ಎಂದು ನಾವು ಹೋರಾಟ ಮಾಡಲು ಸದಾ ಸಿದ್ಧರಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.