ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 10 ರೂಪಾಯಿ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲು ಬೆಂಗಳೂರು ಹಾಲು ಒಕ್ಕೂಟ (ಬಮುಲ್) ನಿರ್ಧರಿಸಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ಒಳಗೊಂಡ ನಿಯೋಗವು ನಾಳೆ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ.
ಬಮುಲ್ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ರೈತರ ಹಿತರಕ್ಷಣೆಯೇ ಮುಖ್ಯ ಉದ್ದೇಶ
"ರೈತರ ಹಿತ ಕಾಪಾಡುವುದು ಮತ್ತು ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಪಶು ಆಹಾರ, ಮೇವು ಹಾಗೂ ಹಸುಗಳ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿರುವುದರಿಂದ ಹಾಲಿನ ದರವನ್ನು ಲೀಟರ್‌ಗೆ ಕನಿಷ್ಠ 10 ರೂಪಾಯಿ ಹೆಚ್ಚಳ ಮಾಡಬೇಕೆಂದು ಸ್ವತಃ ಹಾಲು ಉತ್ಪಾದಕ ರೈತರೇ ಬಲವಾದ ಬೇಡಿಕೆ ಇಟ್ಟಿದ್ದಾರೆ" ಎಂದು ಡಿ.ಕೆ. ಸುರೇಶ್ ತಿಳಿಸಿದರು.
ನಾಳೆ ಸಿಎಂಗೆ ವಿಸ್ತೃತ ಪ್ರಸ್ತಾವನೆ ಸಲ್ಲಿಕೆ
ಹಾಲು ಒಕ್ಕೂಟಗಳು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು, ನಿರಂತರವಾಗಿ ಏರಿಕೆಯಾಗುತ್ತಿರುವ ಆಡಳಿತಾತ್ಮಕ ವೆಚ್ಚಗಳು ಹಾಗೂ ಹಾಲು ಸಂಗ್ರಹಣೆ ಮತ್ತು ಉತ್ಪಾದನಾ ವೆಚ್ಚಗಳ ಸಮಗ್ರ ವಿವರಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಲಾಗಿದೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ, ಈ ಎಲ್ಲಾ ವಾಸ್ತವಾಂಶಗಳನ್ನು ಅವರ ಮುಂದಿಟ್ಟು ದರ ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ವಿಸ್ತೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.