ಬೆಂಗಳೂರು:ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯು (ಕೆಜಿಐಡಿ) ತನ್ನ ಕೆಜಿಐಡಿ-ಎಂಐಎಸ್ (KGID-MIS) ತಂತ್ರಾಂಶದಲ್ಲಿ ಸಮಸ್ಯೆ ದಾಖಲಿಸುವ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತಂದು ನೂತನ ಸುತ್ತೋಲೆ ಹೊರಡಿಸಿದೆ. ಇಲಾಖೆಯ ಆನ್‌ಲೈನ್ ಸೇವೆಗಳನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಇಲಾಖೆಯ ನಿರ್ದೇಶಕರು ಹೊರಡಿಸಿರುವ ಅಧಿಕೃತ ಸುತ್ತೋಲೆಯ ಪ್ರಕಾರ, ಇನ್ನು ಮುಂದೆ ಸರ್ಕಾರಿ ನೌಕರರು, ಡಿಡಿಒಗಳು ಹಾಗೂ ವಿಮಾದಾರರು ದಾಖಲಿಸುವ ಯಾವುದೇ ದೂರು ಅಥವಾ ಟಿಕೆಟ್‌ಗಳು ನೇರವಾಗಿ ಪ್ರತ್ಯೇಕ ಶಾಖೆ ಅಥವಾ ಜಿಲ್ಲೆಗಳಿಗೆ ಸಲ್ಲಿಕೆಯಾಗುವುದಿಲ್ಲ. ಬದಲಾಗಿ, ಸೃಜಿಸಲಾಗುವ ಎಲ್ಲ ಟಿಕೆಟ್‌ಗಳು ಮೊದಲು ಕೇಂದ್ರ ಕಚೇರಿಯ ಸಹಾಯವಾಣಿ ಕೇಂದ್ರದಲ್ಲೇ ಸ್ವೀಕೃತವಾಗಲಿವೆ.
ಹೀಗೆ ಸ್ವೀಕೃತವಾಗುವ ಟಿಕೆಟ್‌ಗಳನ್ನು ಸಹಾಯವಾಣಿ ಕೇಂದ್ರದಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ಅವುಗಳ ವರ್ಗ (Category), ಉಪವರ್ಗ (Sub Category), ಸಮಸ್ಯೆಯ ವಿಧ (Problem Type) ಹಾಗೂ ಉಪವಿಧಗಳ (Sub Problem Type) ಆಧಾರದ ಮೇಲೆ ಸಂಬಂಧಪಟ್ಟ ವಿಭಾಗ ಮತ್ತು ಜಿಲ್ಲಾ ಕಚೇರಿಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ವರ್ಗಾವಣೆಯಾದ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಜಿಲ್ಲಾ ವಿಮಾ ಕಚೇರಿಗಳಲ್ಲಿ ಟಿಕೆಟ್‌ಗಳ ವಿಲೇವಾರಿಗೆ ನಿಯೋಜಿಸಲಾದ ಸಿಬ್ಬಂದಿಯು ಅಧಿಕೃತ ಪೋರ್ಟಲ್‌ಗೆ ಲಾಗಿನ್ ಆಗಿ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದ್ದು, ಈ ಹಿಂದಿನ ಸುತ್ತೋಲೆಯಲ್ಲಿ ತಿಳಿಸಲಾಗಿರುವ ಕಾರ್ಯವಿಧಾನಗಳನ್ನು ಮುಂದುವರಿಸಲು ನಿರ್ದೇಶಿಸಲಾಗಿದೆ.
