ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಕಾರಿಗಳು ಹಾಗೂ ನೌಕರರ ಸೇವಾ ವಿವರಗಳನ್ನು (Service Details) ನೂತನ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಾದ HRMS 2.0 Electronic Service Register (ESR) ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಿ ನವೀಕರಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ.
ಮೂಲ ದಾಖಲೆ ಪರಿಶೀಲಿಸಿ ಅಪ್‌ಲೋಡ್ ಮಾಡಲು ಆದೇಶ
ಪ್ರಸ್ತುತ HRMS-1 ನಲ್ಲಿ ಲಭ್ಯವಿರುವ ಸಿಬ್ಬಂದಿಯ ಮಾಹಿತಿ HRMS 2.0 ESR ಪೋರ್ಟಲ್‌ನಲ್ಲಿ ಪ್ರತಿಬಿಂಬಿಸಲಿದೆ. ಸಂಬಂಧಪಟ್ಟ ಕಚೇರಿ ಮುಖ್ಯಸ್ಥರು ಹಾಗೂ ನಿಯಂತ್ರಣಾಧಿಕಾರಿಗಳು ಈ ವಿವರಗಳನ್ನು ನೌಕರರ ಮೂಲ ಸೇವಾ ಪುಸ್ತಕ (Service Register) ಮತ್ತು ದಾಖಲೆಗಳೊಂದಿಗೆ ಖುದ್ದು ಪರಿಶೀಲಿಸಬೇಕು. ಯಾವುದೇ ವ್ಯತ್ಯಾಸ, ಲೋಪದೋಷಗಳು ಕಂಡುಬಂದಲ್ಲಿ ತಕ್ಷಣವೇ ತಿದ್ದುಪಡಿ ಮಾಡಿ, ನಿಖರ ಮಾಹಿತಿಯನ್ನು ದೃಢೀಕರಿಸುವಂತೆ ಸೂಚಿಸಲಾಗಿದೆ.
ಅಂತಿಮ ಗಡುವು: ಅಕ್ಟೋಬರ್ 31, 2026
ಈ ಪರಿಶೀಲನಾ ಪ್ರಕ್ರಿಯೆಯನ್ನು 2026ರ ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸಬೇಕು. ಕಾರ್ಯ ಪೂರ್ಣಗೊಂಡ ಬಳಿಕ ಅನುಸರಣಾ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಆಯುಕ್ತರ ಕಚೇರಿಗೆ ಸಲ್ಲಿಸಬೇಕಿದೆ. ಯಾವುದೇ ತಪ್ಪು ಅಥವಾ ಲೋಪಗಳಿಗೆ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.
HRMS-1 ಸ್ಥಗಿತದ ಮುನ್ಸೂಚನೆ
ಭವಿಷ್ಯದಲ್ಲಿ ಹಳೆಯ HRMS-1 ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ಆ ಸಂದರ್ಭದಲ್ಲಿ ನೌಕರರ ಮಾಹಿತಿಯನ್ನು ಹೊಸ ವ್ಯವಸ್ಥೆಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಂಚಿತವಾಗಿಯೇ ESR ಪೋರ್ಟಲ್‌ನಲ್ಲಿ ಪ್ರತಿಯೊಬ್ಬ ನೌಕರರ ದಾಖಲೆಗಳನ್ನು ಪೂರ್ಣಪ್ರಮಾಣದಲ್ಲಿ ದಾಖಲಿಸಿ ಅಪ್‌ಡೇಟ್ ಮಾಡುವುದು ಅತ್ಯಗತ್ಯ ಎಂದು ಇಲಾಖೆ ತಿಳಿಸಿದೆ.