LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

EXCLUSIVE: ರಾಜ್ಯದಲ್ಲಿ 4 ತಿಂಗಳಿಂದ ‘ಶುಚಿ ಕಿಟ್’ ಇಲ್ಲದೆ 'ವಸತಿ ಶಾಲಾ ವಿದ್ಯಾರ್ಥಿ'ಗಳು ಪರದಾಟ!

ಮಂಡ್ಯ: ಹೊಸ ವಸತಿ ಶಾಲೆಗಳನ್ನು ಘೋಷಿಸಿ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ತೋರುವ ಉತ್ಸಾಹವನ್ನು, ಅಲ್ಲಿ ಓದುತ್ತಿರುವ ಬಡ ಮಕ್ಕಳ ಮೂಲಭೂತ ಸೌಕರ್ಯ ಒದಗಿಸುವಲ್ಲಿ ತೋರದಿರುವುದು ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ಭರ್ತಿ ನಾಲ್ಕು ತಿಂಗಳು ಕಳೆಯುತ್ತಿದ್ದರೂ, ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ತಲುಪಬೇಕಿದ್ದ ‘ಶುಚಿ ಕಿಟ್’ಗಳನ್ನು ವಿತರಿಸದೆ ಆಡಳಿತ ಯಂತ್ರ ಮೀನಾಮೇಷ ಎಣಿಸುತ್ತಿದೆ.

9,500ಕ್ಕೂ ಹೆಚ್ಚು ಮಕ್ಕಳ ಭವಿಷ್ಯದ ಜೊತೆ ಖಾಕಿ-ಖಾದಿ ಚೆಲ್ಲಾಟ:

ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಡಾ. ಬಿ.ಆರ್. ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾ ಗಾಂಧಿ ಹಾಗೂ ಏಕಲವ್ಯ ವಸತಿ ಶಾಲೆಗಳ ಬಡ ವಿದ್ಯಾರ್ಥಿಗಳು ಇಂದು ನೈರ್ಮಲ್ಯಕ್ಕಾಗಿ ತೀವ್ರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದಿನನಿತ್ಯದ ಸ್ವಚ್ಛತೆಗೆ ಅತ್ಯಗತ್ಯವಾಗಿರುವ ಸ್ನಾನದ ಸಾಬೂನು, ಬಟ್ಟೆ ತೊಳೆಯುವ ಸೋಪು, ಬ್ರಷ್, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ ಹಾಗೂ ಹೆಣ್ಣುಮಕ್ಕಳಿಗೆ ಬೇಕಾದ ಸುರಕ್ಷಾ ಕವಚಗಳನ್ನೊಳಗೊಂಡ ಕಿಟ್‌ಗಳನ್ನು ಜೂನ್ ತಿಂಗಳಿನಿಂದಲೇ ಬಂದ್ ಮಾಡಲಾಗಿದೆ. ಪರಿಣಾಮ, ಮಂಡ್ಯ ಜಿಲ್ಲೆಯೊಂದರಲ್ಲೇ 41 ವಸತಿ ನಿಲಯಗಳ ಸುಮಾರು 9,500ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಸರ್ಕಾರಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ.

ಅಧಿಕಾರಿಗಳ ದರ ಶೀತಲ ಸಮರ: ಬಡ ಪೋಷಕರ ಜೇಬಿಗೆ ಕತ್ತರಿ!

ರಾಜ್ಯ ಸರ್ಕಾರ ಹಾಗೂ ಕೆಎಸ್‌ಡಿಎಲ್‌ (KSDL) / ಎಂಎಸ್‌ಐಎಲ್ ಸಂಸ್ಥೆಗಳ ನಡುವಿನ ‘ದರ ಹೊಂದಾಣಿಕೆ’ ಮತ್ತು ಟೆಂಡರ್ ಅಂತಿಮಗೊಳಿಸುವಿಕೆಯ ವಿಳಂಬ ನೀತಿಯೇ ಈ ಅಧ್ವಾನಕ್ಕೆ ಕಾರಣ ಎನ್ನಲಾಗುತ್ತಿದೆ. ಅಧಿಕಾರಿಗಳ ಪೀಠಾಸೀನ ಹಾಗೂ ಕೆಂಪುಪಟ್ಟಿಯ ಆಡಳಿತ ವೈಫಲ್ಯದಿಂದಾಗಿ, ಜೂನ್‌ ವೇಳೆಗೆ ಸಿಗಬೇಕಿದ್ದ ಕಿಟ್‌ಗಳು ಸೆಪ್ಟೆಂಬರ್ ಮುಗಿಯುತ್ತ ಬಂದರೂ ಪೂರೈಕೆಯಾಗಿಲ್ಲ.

ಉಚಿತ ಊಟ, ವಸತಿ ಮತ್ತು ಸೌಲಭ್ಯ ಸಿಗುತ್ತದೆ ಎಂಬ ಭರವಸೆಯಿಂದ ಕೂಲಿ-ನಾಲಿ ಮಾಡುವ ಬಡ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಿದ್ದಾರೆ. ಆದರೆ, ಈಗ ಸಾಬೂನು-ಪೇಸ್ಟ್‌ಗೂ ತಮ್ಮ ಸ್ವಂತ ಜೇಬಿನಿಂದಲೇ ಹಣ ವಿನಿಯೋಗಿಸಬೇಕಾದ ದುಸ್ಥಿತಿ ಎದುರಾಗಿದೆ. "ಹಣ ಕೊಟ್ಟು ಪ್ರತಿಯೊಂದನ್ನೂ ನಾವೇ ಖರೀದಿಸುವುದಾದರೆ, ಸರ್ಕಾರಿ ವಸತಿ ಶಾಲೆಗಳಿದ್ದು ಏನು ಪ್ರಯೋಜನ?" ಎಂದು ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಅಧಿಕಾರಿ ವರ್ಗ:

"ಈ ವರ್ಷ ಯಾಕಿಷ್ಟು ತಡವಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ" ಎಂದು ಮಂಡ್ಯ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರು ಹೇಳಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮೇಲಧಿಕಾರಿಗಳನ್ನು ಪ್ರಶ್ನಿಸದೆ, ವ್ಯವಸ್ಥೆಯನ್ನು ಸರಿಪಡಿಸದೆ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, "ಮಕ್ಕಳಿಗೆ ಅವರ ಪೋಷಕರೇ ವಸ್ತುಗಳನ್ನು ತಂದುಕೊಡುತ್ತಿದ್ದಾರೆ" ಎಂದು ವಸತಿ ಶಾಲೆಯ ವಾರ್ಡನ್‌ಗಳು ಅಳಲು ತೋಡಿಕೊಳ್ಳುತ್ತಿದ್ದು, ಸರ್ಕಾರಿ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದಂತೆ.

ಹೊಸ ಶಾಲೆಗಳ ಉದ್ಘಾಟನೆಗೆ ತೋರುವ ಆತುರವನ್ನು ಬಡ ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ ಕಾಯುವಲ್ಲಿಯೂ ಸರ್ಕಾರ ತಕ್ಷಣವೇ ತೋರಿಸಬೇಕಿದೆ. ಇನ್ನಾದರೂ ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ಶುಚಿ ಕಿಟ್‌ಗಳನ್ನು ವಿತರಿಸುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಿದೆ.

ವಿಶೇಷ ವರದಿ: ಗಿರೀಶ್ ರಾಜ್, ಮಂಡ್ಯ

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!