ಬೆಂಗಳೂರು: ಅತ್ಯಾಚಾರ ಹಾಗೂ ಅಸ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಪ್ರಜ್ವಲ್ ರೇವಣ್ಣಗೆ ಫೋನ್ ತಂದು ಕೊಟ್ಟವರು ಯಾರು? ಎಷ್ಟು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿದ್ದಾನೆ? ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುವಂತೆ ಈ ತಂಡಕ್ಕೆ ಸೂಚನೆ ನೀಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಹೇಗೆ ಬಂತು? ಎಂಬ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಲೋಕ್ ಕುಮಾರ್ ಭೇಟಿಯಾಗಿ ಜಿನೇಂದ್ರ ಅವರು ಕೂಡ ಚರ್ಚೆ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದ್ದು, ಸ್ಥಳೀಯರಿಗೆ ಟವರ್ ಸಿಗದೆ ನಿತ್ಯ ಪರದಾಡುತ್ತಾರೆ. ಹೀಗಿರುವಾಗ ಜೈಲಿನ ಒಳಗೆ ಏರ್ಟೆಲ್ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಏರ್ಟೆಲ್ ಸಿಮ್ಗಳು ಪತ್ತೆಯಾಗಿವೆ, ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಸಿಮ್ಗಳು ಪತ್ತೆ ಆಗುತ್ತಿವೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಜೈಲಿನೊಳಗೆ ಹೇಗೆ ಮೊಬೈಲ್ ಹೋಗ್ತಿದೆ? ಇದರಲ್ಲಿ ಅಧಿಕಾರಿಗಳು ಏನಾದರೂ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಅಧಿಕಾರಿಗಳು ಭಾಗಿಯಾಗಿದ್ರೆ ಅಂತವರ ವಿರುದ್ಧ ಕ್ರಮಕ್ಕೆ ಆದೇಶ ಮಾಡೋದಾಗಿ ತಿಳಿಸಿದ್ದಾರೆ
ಪ್ರಜ್ವಲ್ ರೇವಣ್ಣಗೆ ಫೋನ್ ತಂದು ಕೊಟ್ಟವರು ಯಾರು? ಎಷ್ಟು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿದ್ದಾನೆ? ಇದರಲ್ಲಿ ಯಾರೆಲ್ಲಾ ಕೈವಾಡ ಇದೆ ಎಂಬುದರ ಪತ್ತೆಗೂ ಸೂಚಿಸಲಾಗಿದೆ.
ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆದಾಗ ಕ್ರಮ ಆಗಬೇಕು. ವೈರಲ್ ಆಗಿರುವ ಪ್ರಜ್ವಲ್ ವಿಡಿಯೋ ಸ್ವಲ್ಪ ಹಳೆಯದಾಗಿದ್ದು, ಯಾರು ಅದನ್ನು ಮಾಡಿದ್ದಾರೆ ಎಂಬ ಬಗ್ಗೆ ಹೇಳೋಕಾಗುತ್ತಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಯಾರು ಕೊಟ್ಟರು, ಏನ್ ಕೊಟ್ಟರು ಎಂಬ ಬಗ್ಗೆ ಹೇಳಲು ಆಗಲ್ಲ. ಆದರೆ ಯಾರೇ ಸಹಕಾರ ಕೊಟ್ಟರು ಅವರ ಮೇಲೆ ಕ್ರಮ ಆಗುತ್ತದೆ. ಪೇದೆಯಿಂದ ಹಿಡಿದು ಐಪಿಎಸ್ ವರೆಗೆ ಯಾರನ್ನೂ ನನ್ನ ಕಾಲದಲ್ಲಿ ರಕ್ಷಣೆ ಮಾಡಲ್ಲ ಎಂದವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.