ಬ್ರಿಟನ್‌ನಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದೆ. ಆಡಳಿತಾರೂಢ ಲೇಬರ್ ಪಕ್ಷದ ನಾಯಕತ್ವ ಹಾಗೂ ಪ್ರಧಾನಮಂತ್ರಿ ಹುದ್ದೆಗೆ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡಿದ್ದಾರೆ. ಕೆಲವೇ ಕ್ಷಣಗಳ ಹಿಂದೆ ಅವರು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಸ್ವಂತ ಪಕ್ಷದ ನಾಯಕರಿಂದಲೇ ತೀವ್ರ ಒತ್ತಡ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿದ್ದ ಸ್ಟಾರ್ಮರ್, ಇಷ್ಟು ಬೇಗ ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ಎದುರಾಗಿರುವುದು ಯುಕೆಯಲ್ಲಿ ಸಂಚಲನ ಮೂಡಿಸಿದೆ.
ಲೇಬರ್ ಪಕ್ಷದೊಳಗಿನ ಅಸಮಾಧಾನ, ನಾಯಕತ್ವ ಬದಲಾವಣೆಗೆ ನಡೆದ ಆಂತರಿಕ ಬಂಡಾಯವೇ ಸ್ಟಾರ್ಮರ್ ನಿರ್ಗಮನಕ್ಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ ಅವರಿಂದ ಸ್ಟಾರ್ಮರ್ ಅವರಿಗೆ ತೀವ್ರ ಸವಾಲು ಎದುರಾಯಿತು.ಬ್ರಿಟನ್ ರಾಜಕೀಯ ಸಂಪ್ರದಾಯದ ಪ್ರಕಾರ ಪ್ರಧಾನಮಂತ್ರಿ ಹುದ್ದೆ ವಹಿಸಿಕೊಳ್ಳಲು ಆ ನಾಯಕರು ಕಡ್ಡಾಯವಾಗಿ ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿರಬೇಕು. ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ಆಂಡಿ ಬರ್ನ್‌ಹ್ಯಾಮ್ ಭರ್ಜರಿ ಗೆಲುವು ಸಾಧಿಸಿ ಸಂಸತ್ತಿಗೆ ಪ್ರವೇಶಿಸಿದ್ದಾರೆ.
ಇದಾದ ಬಳಿಕ ಕೀರ್ ಸ್ಟಾರ್ಮರ್ ಅವರ ಸ್ಥಾನಕ್ಕೆ ಬರ್ನ್‌ಹ್ಯಾಮ್ ಅವರನ್ನು ನೇಮಿಸಬೇಕೆಂಬ ಬೇಡಿಕೆ ಲೇಬರ್ ಪಕ್ಷದೊಳಗೆ ಬಲವಾಗಿ ಕೇಳಿಬರತೊಡಗಿತು. ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.ಲಂಡನ್‌ನಲ್ಲಿರುವ ತಮ್ಮ ಅಧಿಕೃತ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಹೊರಗೆ ಈ ವಿಷಯವನ್ನು ಪ್ರಕಟಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಭಾವೋದ್ವೇಗಕ್ಕೊಳಗಾದರು.
“ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ನನ್ನಲ್ಲಿದೆಯೇ ಎಂಬ ಪ್ರಶ್ನೆಯನ್ನು ಲೇಬರ್ ಪಕ್ಷದ ಸದಸ್ಯರು ಕೇಳುತ್ತಿದ್ದಾರೆ. ಆ ಪ್ರಶ್ನೆಗೆ ಬಂದ ಪ್ರತಿಕೂಲ ಉತ್ತರವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ,” ಎಂದು ಅವರು ಹೇಳಿದರು.ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು. “ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಆಗಿತ್ತು,” ಎಂದು ಸ್ಟಾರ್ಮರ್ ಹೇಳಿದ್ದಾರೆ.