ಬೆಂಗಳೂರು: ರಾಜ್ಯದಲ್ಲಿ ವಿಮಾ ಕಂಪನಿಗಳಿಗೆ ನಕಲಿ ಕ್ಲೇಮ್‌ಗಳು ಹಾಗೂ ಸುಳ್ಳು ದಾಖಲೆಗಳ ಮೂಲಕ ವಂಚನೆ ಎಸಗುತ್ತಿರುವ ಜಾಲಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ಸ್ಪಷ್ಟ ನಿರ್ದೇಶನದನ್ವಯ, ವಿಮಾ ವಂಚನೆ ಪ್ರಕರಣಗಳ ಸತ್ಯಾಸತ್ಯತೆಯನ್ನು ಶೀಘ್ರವಾಗಿ ಹೊರತರುವ ಉದ್ದೇಶದಿಂದ ರಾಜ್ಯಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ. ಇನ್ಮುಂದೆ ನಕಲಿ ಕ್ಲೇಮ್ ಹಾಗೂ ವಿಮಾ ಯೋಜನೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಎಲ್ಲಾ ದೂರುಗಳನ್ನು ಈ ಎಸ್‌ಐಟಿಗೆ ವರ್ಗಾಯಿಸಲಾಗುತ್ತದೆ.
ಈ ವಿಶೇಷ ತನಿಖಾ ತಂಡಕ್ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಸೆಕ್ಷನ್ 2(1)(u) ಅಡಿಯಲ್ಲಿ 'ಪೊಲೀಸ್ ಠಾಣೆ'ಯ ಸ್ಥಾನಮಾನ ನೀಡಲಾಗಿದೆ. ಇದರಿಂದಾಗಿ ಇಡೀ ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಹಿಸುವ ಹಾಗೂ ತನಿಖೆ ನಡೆಸುವ ಅಧಿಕಾರ ಈ ತಂಡಕ್ಕೆ ಇರಲಿದೆ. ಅಲ್ಲದೆ, ತನಿಖಾಧಿಕಾರಿಗಳಿಗೆ BNS ಸೆಕ್ಷನ್ 193ರ ಅಡಿಯಲ್ಲಿ ಸಂಬಂಧಪಟ್ಟ ನ್ಯಾಯಾಲಯಗಳಿಗೆ ನೇರವಾಗಿ ಅಂತಿಮ ವರದಿ (Charge Sheet) ಸಲ್ಲಿಸಲು ಪೂರ್ಣ ಅಧಿಕಾರ ನೀಡಲಾಗಿದೆ.
ಐಜಿಪಿ (IGP) ಹಂತದ ಅಧಿಕಾರಿಯ ನೇತೃತ್ವದಲ್ಲಿ ರಚನೆಯಾಗಿರುವ ಈ ಎಸ್‌ಐಟಿ ತಂಡದಲ್ಲಿ ಎಸ್‌ಪಿ (SP), ಡಿವೈಎಸ್‌ಪಿ (DySP) ಹಾಗೂ ಇನ್‌ಸ್ಪೆಕ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ (ADGP) ಅವರ ಪ್ರತ್ಯಕ್ಷ ಮೇಲ್ವಿಚಾರಣೆಯಲ್ಲಿ ತನಿಖಾ ಪ್ರಕ್ರಿಯೆಗಳು ನಡೆಯಲಿದ್ದು, ಈ ತಂಡವು ಕಾಲಕಾಲಕ್ಕೆ ತನಿಖೆಯ ಪ್ರಗತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಸರ್ಕಾರದ ಈ ನಿರ್ಧಾರದಿಂದ ವಿಮಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮಗಳಿಗೆ ಬ್ರೇಕ್ ಬೀಳಲಿದೆ.