ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ನಡೆದಿರುವ ಸಾಲು ಸಾಲು ಅಕ್ರಮಗಳು ತನಿಖೆ ಮುಂದುವರಿದಂತೆ ಒಂದೊಂದಾಗಿ ಹೊರಬರುತ್ತಿವೆ. ಮಧ್ಯವರ್ತಿಗಳ ಮೂಲಕ ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕುತ್ತಿದ್ದ ಜಾಲದ ಕರಾಳ ಮುಖ ಈಗ ಬಯಲಾಗಿದ್ದು, ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಹುದ್ದೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಗೆ ಜಾಲದ ಕೊಂಡಿಗಳು ಸಿಕ್ಕಿದ್ದು, ಅಕ್ರಮದ ಜಾಡು ಹಿಡಿದು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ತನಿಖಾ ಸಂಸ್ಥೆಗಳ ಮೂಲಗಳ ಪ್ರಕಾರ, ಕೆಪಿಎಸ್‌ಸಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟಕ್ಕಾಗಿ ಎರಡು ಪ್ರತ್ಯೇಕ ತಂಡಗಳು ಸಕ್ರಿಯವಾಗಿದ್ದವು. ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳಿ ನೇತೃತ್ವದ ಮಧ್ಯವರ್ತಿಗಳ ತಂಡ ಒಂದಾದರೆ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಕೆಲ ಸದಸ್ಯರನ್ನೊಳಗೊಂಡ ಇನ್ನೊಂದು ತಂಡ ಕಾರ್ಯಾಚರಿಸುತ್ತಿತ್ತು. ಈ ಮಧ್ಯವರ್ತಿಗಳು ಹಣ ನೀಡಲು ಸಿದ್ಧರಿರುವ ಅಭ್ಯರ್ಥಿಗಳನ್ನು ಪತ್ತೆಹಚ್ಚಿ ಡೀಲ್ ಕುದಿಸುತ್ತಿದ್ದರು. ಈ ಎರಡೂ ತಂಡಗಳ ನಡುವಿನ ಸಂಪರ್ಕ, ಹಣದ ವಹಿವಾಟು ಹಾಗೂ ಹಂಚಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಇಡಿ ಮತ್ತು ಸಿಐಡಿ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರ ಟೀಮ್ ಅನ್ನು ಪತ್ತೆಹಚ್ಚಿರುವ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇತ್ತ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೂ, ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಮುಂದುವರಿಸಲು ಸರ್ಕಾರದ ಅಧಿಕೃತ ಅನುಮತಿಗಾಗಿ ಸಿಐಡಿ ಕಾಯುತ್ತಿದೆ. ಸರ್ಕಾರದಿಂದ ಇನ್ನು ಸೂಕ್ತ ಅನುಮತಿ ಸಿಗದ ಕಾರಣ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ತನಿಖೆಗೆ ಸದ್ಯ ತಡೆ ಬಿದ್ದಂತಾಗಿದ್ದು, ಸರ್ಕಾರದ ಮುಂದಿನ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.