ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಎಂದಿಗೂ 'ಹಿಟ್ ಅಂಡ್ ರನ್' ರಾಜಕಾರಣ ಮಾಡುವುದಿಲ್ಲ. ಸ್ವಲ್ಪ ತಡೆಯಿರಿ, ಎಲ್ಲದಕ್ಕೂ ಸೂಕ್ತ ಸಮಯದಲ್ಲಿ ಸರಿಯಾಗಿಯೇ ಉತ್ತರ ನೀಡುತ್ತೇನೆ. ಕಾಲ ಬಂದಾಗ ಪ್ರತಿಯೊಂದನ್ನೂ ಹೊರಹಾಕುತ್ತೇನೆ. ಸದ್ಯ ನೀವು ಅಂತಿಮ ಘಟ್ಟ ತಲುಪಿದ್ದೀರಿ, ಎಲ್ಲವೂ ಶೀಘ್ರದಲ್ಲೇ ಮುಗಿಯಲಿದೆ" ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು. ತಮ್ಮ ಬಳಿ ಇರುವ ಪ್ರಮುಖ ವಿಚಾರಗಳನ್ನು ಹಂತ ಹಂತವಾಗಿ ಹೊರಹಾಕಿದರೆ ದಿನಕ್ಕೊಂದು ಹೊಸ ಸುದ್ದಿ ಆಗುತ್ತದೆ ಎಂದು ಅವರು ಹೇಳಿದರು.
ನಂದಿನಿ ಹಾಲಿನ ದರ ಏರಿಕೆಗೆ ವಿರೋಧ: ರೈತರಿಗೆ ₹10 ಪ್ರೋತ್ಸಾಹ ಧನ ನೀಡಲು ಆಗ್ರಹ
ಇದೇ ವೇಳೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ಕುಮಾರಸ್ವಾಮಿ, ಸಾರ್ವಜನಿಕರ ಮೇಲೆ ಮತ್ತೆ ದರ ಏರಿಕೆಯ ಹೊರೆ ಹಾಕುವುದು ಸರಿಯಲ್ಲ ಎಂದರು. "ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕವಾಗಿ ಹಣ ಮೀಸಲಿಟ್ಟಿದೆ. ಅದೇ ಮಾದರಿಯಲ್ಲಿ '6ನೇ ಗ್ಯಾರಂಟಿ' ಎಂದು ಪರಿಗಣಿಸಿ ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಿಸಲಿ. ಜನಸಾಮಾನ್ಯರಿಗೂ ಹೊರೆಯಾಗಬಾರದು, ಇತ್ತ ರೈತರಿಗೂ ತೊಂದರೆಯಾಗಬಾರದು. ಆದ್ದರಿಂದ ರೈತರ ಪ್ರೋತ್ಸಾಹ ಧನವನ್ನು ಪ್ರಸ್ತುತ ಇರುವ ₹5 ರಿಂದ ₹10 ಕ್ಕೆ ಏರಿಕೆ ಮಾಡಬೇಕು" ಎಂದು ಒತ್ತಾಯಿಸಿದರು.
ಜನರ ಜೇಬಿಗೆ ಕನ್ನ ಹಾಕದೆ, ಸರ್ಕಾರವೇ ಸ್ವತಃ ಸಬ್ಸಿಡಿ ನೀಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಅವರು ಆಗ್ರಹಿಸಿದರು. ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ನೀಡುತ್ತಿರುವ ಸರ್ಕಾರ, ಅನ್ನದಾತ ರೈತರಿಗಾಗಿ ಈ ಪ್ರೋತ್ಸಾಹ ಧನ ಹೆಚ್ಚಳಕ್ಕೂ ಹಣ ಮೀಸಲಿಡಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.