ಬೆಂಗಳೂರು: ರಾಜಧಾನಿಯಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೊದಲ ತಲೆದಂಡ ತೆಗೆದುಕೊಂಡಿದ್ದು, ಎಫ್‌ಡಿಎ (FDA) ಅಧಿಕಾರಿ ಹಾಗೂ ಸರ್ಕಲ್-1 ಎಡಿಸಿ ಓಂಕಾರೇಶ್ವರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್‌ನಲ್ಲಿ ನಡೆದಿದ್ದ ನಕಲಿ ಔಷಧ ಅಕ್ರಮದ ವಿರುದ್ಧ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಅಧಿಕಾರಿಯ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನಕಲಿ ಔಷಧ ಮಾಫಿಯಾ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸ್ಪಷ್ಟ ಸಂದೇಶ ರವಾನಿಸಿದೆ.