ಬೆಂಗಳೂರು: ರಾಜ್ಯದ ಖ್ಯಾತ ಚಿನ್ನ ಖರೀದಿ ಸಂಸ್ಥೆ ‘ಅಟ್ಟಿಕಾ ಗೋಲ್ಡ್’ ಕಂಪನಿಗೆ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಇಲಾಖೆಯಿಂದ ಸತತ ಬಿಗ್ ಶಾಕ್ ಎದುರಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮುಗಿಸಿ ತೆರಳಿದ ಬೆನ್ನಲ್ಲೇ, ಇದೀಗ ಐಟಿ ಇಲಾಖೆ ಅಧಿಕಾರಿಗಳು ಅಟ್ಟಿಕಾ ಗೋಲ್ಡ್ ಸಂಸ್ಥೆಯ ಕಚೇರಿಗಳು ಮತ್ತು ಮಾಲೀಕರ ನಿವಾಸಗಳ ಮೇಲೆ ದಿಢೀರ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಸಂಸ್ಥೆಯು ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರು ಹಾಗೂ ಗ್ರಾಹಕರಿಂದ ನೇರವಾಗಿ ಅಪಾರ ಪ್ರಮಾಣದ ಚಿನ್ನ ಖರೀದಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ಅಕ್ರಮ ಹಣಕಾಸು ವ್ಯವಹಾರ ಹಾಗೂ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಒಟ್ಟು 19ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ಐಟಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ಕಂಪನಿಯ ಆರ್ಥಿಕ ವ್ಯವಹಾರಗಳ ಮಾಹಿತಿ ಕಲೆ ಹಾಕುತ್ತಿದೆ.
ಸದ್ಯ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಸಂಸ್ಥೆಯ ಆರ್ಥಿಕ ಲಾ ವದೇವಿ, ಖಾತೆ ಪುಸ್ತಕಗಳು, ಕಂಪ್ಯೂಟರ್‌ಗಳ ಡಿಜಿಟಲ್ ಡೇಟಾ ಹಾಗೂ ಪ್ರಮುಖ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಮೂಲಗಳ ಪ್ರಕಾರ, ದಾಖಲೆಗಳಿಲ್ಲದ ಬೃಹತ್ ಮೊತ್ತದ ವಹಿವಾಟುಗಳು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸತತ ರೇಡ್ ಹಾಗೂ ತನಿಖಾ ಪ್ರಕ್ರಿಯೆ ಮುಂದುವರಿದಿದೆ.