ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತೆ ಬಿಗ್ ಶಾಕ್ ನೀಡಿದೆ. ತಮಿಳುನಾಡಿನ ಮನವಿಯನ್ನು ಪುರಸ್ಕರಿಸಿರುವ ಸಮಿತಿಯು, ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರನ್ನು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿ ಆದೇಶಿಸಿದೆ. ರಾಜ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಕುಡಿಯುವ ನೀರಿಗೇ ಅಭಾವ ಸೃಷ್ಟಿಯಾಗಿರುವ ಈ ಸೂಕ್ಷ್ಮ ಪರಿಸ್ಥಿತಿಯಲ್ಲಿ CWRC ಯ ಈ ನಿರ್ಧಾರವು ಕರ್ನಾಟಕ ಸರ್ಕಾರ ಮತ್ತು ರೈತರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನವನ್ನು ಮೂಡಿಸಿದೆ.
ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಉಭಯ ರಾಜ್ಯಗಳ ವಾದ ಮತ್ತು ಪ್ರಸ್ತುತ ಜಲಾಶಯಗಳ ನೀರಿನ ಮಟ್ಟವನ್ನು ಪರಿಶೀಲಿಸಿದ ಬಳಿಕ ಸಮಿತಿಯು ಈ ಆದೇಶ ಹೊರಡಿಸಿದೆ. CWRC ನೀಡಿರುವ ಈ ಶಿಫಾರಸಿನ ಕುರಿತು ಶೀಘ್ರದಲ್ಲೇ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ನೀರಿನ ಅಭಾವ ತೀವ್ರವಾಗಿರುವುದರಿಂದ, CWMA ಸಭೆಯಲ್ಲಿ ಕರ್ನಾಟಕ ಸರ್ಕಾರವು ತನ್ನ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿ ನೀರು ಹರಿಸುವುದಕ್ಕೆ ಬಲವಾದ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.