ಬೆಂಗಳೂರು: ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಹಂಚಿಕೆಯಲ್ಲಿ ಸರ್ಕಾರಿ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಗ್ರಾಮೀಣ ಅಭ್ಯರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇಕಡಾ 7.5ರಷ್ಟು ಸಮತಳ ಮೀಸಲಾತಿ (Horizontal Reservation) ನೀಡುವ 'ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026'ರ ಅಧಿಕೃತ ಗಜೆಟ್ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಈ ನಿಯಮವು ತಕ್ಷಣದಿಂದಲೇ ಜಾರಿಗೆ ಬಂದಿದೆ.
ಹೊಸ ತಿದ್ದುಪಡಿ ನಿಯಮಗಳ ಪ್ರಕಾರ, ವೃತ್ತಿಪರ ಶಿಕ್ಷಣದಲ್ಲಿ ಗ್ರಾಮೀಣ ಕೋಟಾದಡಿ ಲಭ್ಯವಿರುವ ಒಟ್ಟು ಶೇ. 15ರಷ್ಟು ಮೀಸಲಾತಿಯಲ್ಲಿ ಈ ಹೊಸ ವಿಂಗಡನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಸತತವಾಗಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಶೇ. 7.5ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.
ಇನ್ನು ಗ್ರಾಮೀಣ ಕೋಟಾದ ಉಳಿದ ಶೇ. 7.5ರಷ್ಟು ಮೀಸಲಾತಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಇತರ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ಅಥವಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಓದಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಸರ್ಕಾರದ ಈ ತೀರ್ಮಾನದಿಂದಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದಿದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಹೆಚ್ಚಿನ ಆದ್ಯತೆ ಮತ್ತು ಅವಕಾಶಗಳು ಲಭ್ಯವಾಗಲಿವೆ.