ಬೆಂಗಳೂರು: ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಸುಮಾರು 36 ಎಕರೆ ಸರ್ಕಾರಿ ಜಮೀನನ್ನು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್ ಗಂಭೀರ ಆಪಾದನೆ ಮಾಡಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ನೀಡಿ, ಸೂಕ್ತ ವಿಚಾರಣೆಗೆ ಅನುಮತಿ ಕೋರಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಜಮೀನನ್ನು ತಮ್ಮ ರಾಜಕೀಯ ಬಲದಿಂದ ಪತ್ನಿಯ ಹೆಸರಿಗೆ ಮಾಡಿಸಿಕೊಂಡಿದ್ದ ಸಚಿವರು, ಕೇವಲ 15 ದಿನಗಳ ಹಿಂದಷ್ಟೇ ಆ ಆಸ್ತಿಯನ್ನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು. ಬಿಬಿಎಂಪಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಸಾಮಾನ್ಯ ರೈತರಿಗೆ 10 ಗುಂಟೆ ಜಮೀನು ಗ್ರಾಂಟ್ ಮಾಡಲು ನಿಯಮಗಳ ನೆಪ ಹೇಳುವ ಸರ್ಕಾರಿ ವ್ಯವಸ್ಥೆ, ಸಚಿವರಿಗೆ ಮತ್ತು ಅವರ ಪತ್ನಿಗೆ ಸಾಲು ಸಾಲು ಜಮೀನುಗಳನ್ನು ಹೇಗೆ ಮಂಜೂರು ಮಾಡಿಕೊಡುತ್ತದೆ ಎಂದು ಪ್ರಶ್ನಿಸಿ 500 ರಿಂದ 600ಕ್ಕೂ ಹೆಚ್ಚು ಸಂಬಂಧಿತ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
ಕುರುಬರಹಳ್ಳಿಯ ಸರ್ವೇ ನಂಬರ್ 158ರಲ್ಲಿರುವ ಈ 36 ಎಕರೆ ಜಮೀನಿನಲ್ಲಿ ಸಚಿವರ ಪತ್ನಿಯ ಹೆಸರಿಗೆ 10 ಎಕರೆ ಹಾಗೂ ಉಳಿದ 26 ಎಕರೆಯನ್ನು ನಟರಾಜ ನಾಯ್ಡು ಎಂಬುವರ ಹೆಸರಿಗೆ ನೋಂದಣಿ ಮಾಡಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಉಳುಮೆ ಚೀಟಿಯಿಂದ ಹಿಡಿದು ಪ್ರತಿಯೊಂದು ದಾಖಲೆಯನ್ನು ಪೋರ್ಜರಿ ಮಾಡಲಾಗಿದ್ದು, ಇಷ್ಟು ವರ್ಷಗಳಿಂದ ಜಮೀನಿನ ಅನುಭೋಗದಲ್ಲಿದ್ದ ಬಡ ರೈತರಿಗೆ ಹೆದರಿಸಿ ಬೆದರಿಸಿ ಆಸ್ತಿಯನ್ನು ಲಪಟಾಯಿಸಲಾಗಿದೆ ಎಂದು ಅವರು ದೂರಿದರು.
ಮಾರುಕಟ್ಟೆಯಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಈ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿಕೊಳ್ಳಲು ಸಂಚು ರೂಪಿಸಲಾಗಿದೆ. ತಕ್ಷಣವೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಈ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಶುಕ್ರವಾರ ಕೇಂದ್ರ ಸಚಿವರ ನೇತೃತ್ವದಲ್ಲಿ ಈ ವಿವಾದಿತ ಜಾಗದ ಸ್ಥಳ ತನಿಖೆ ಮತ್ತು ಪರಿಶೀಲನೆ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ ಗೌಡ, ವಕ್ತಾರರಾದ ಎಚ್.ಎನ್. ದೇವರಾಜು ಹಾಗೂ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದು ಆಕ್ರೋಶ ವ್ಯಕ್ತಪಡಿಸಿದರು.