ಬೆಂಗಳೂರು: ಪಡಿತರ ಚೀಟಿದಾರರ ಕಡ್ಡಾಯ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ₹500 ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ, ರಾಜಧಾನಿಯ ನ್ಯಾಯಬೆಲೆ ಅಂಗಡಿಯೊಂದರ ಪರವಾನಗಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಿದ್ದಾರೆ.
ಫೋನ್ ಪೇ ಮೂಲಕ ಲಂಚ ಸ್ವೀಕಾರ:
ಬೆಂಗಳೂರು ದಕ್ಷಿಣ ವಲಯದ ಚಂದ್ರಪ್ಪ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಆರ್ ಸಿ ಹೆಚ್ ಎಸ್' (ಸಂಖ್ಯೆ: ಬಿಎಲ್ಎಸ್-282) ನ್ಯಾಯಬೆಲೆ ಅಂಗಡಿಯಲ್ಲಿ ಈ ಅಕ್ರಮ ನಡೆದಿತ್ತು. ಸ್ಥಳೀಯ ಪಡಿತರ ಚೀಟಿದಾರ ಬಸವರಾಜಸ್ವಾಮಿ ಎಂಬುವವರು ತಮ್ಮ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಬಂದಾಗ, ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಕೆಲಸ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ, ಡಿಜಿಟಲ್ ಪಾವತಿ ವೇದಿಕೆಯಾದ 'ಫೋನ್ ಪೇ' (PhonePe) ಮೂಲಕ ಬಸವರಾಜಸ್ವಾಮಿ ಅವರಿಂದ ₹500 ಲಂಚದ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.
ಖಡಕ್ ಕ್ರಮಕ್ಕೆ ಮುಂದಾದ ಸರ್ಕಾರ:
ಪಡಿತರ ಚೀಟಿದಾರರಿಗೆ ಉಚಿತವಾಗಿ ಮಾಡಿಕೊಡಬೇಕಾದ ಇ-ಕೆವೈಸಿ ಸೇವೆಗೆ ಅಕ್ರಮವಾಗಿ ಹಣ ವಸೂಲಿ ಮಾಡಿರುವ ಬಗ್ಗೆ ಸಚಿವರಿಗೆ ದೂರು ಸಲ್ಲಿಕೆಯಾಗಿತ್ತು. ಡಿಜಿಟಲ್ ವಹಿವಾಟಿನ ಸಾಕ್ಷ್ಯ ಸೇರಿದಂತೆ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ಸಚಿವ ರಿಜ್ವಾನ್ ಅರ್ಷದ್ ಅವರು ಸಂಬಂಧಪಟ್ಟ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಡಿತರ ವಿತರಣೆ ಮತ್ತು ಸೇವೆಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಅಥವಾ ಸಾರ್ವಜನಿಕರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ; ಇಂತಹ ಅಕ್ರಮಗಳಲ್ಲಿ ಭಾಗಿಯಾಗುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಲಾಗಿದೆ.