ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ 50:50 ನಿವೇಶನಗಳನ್ನು ಯಾರೂ ಖರೀದಿಸಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಮುಡಾದ 50:50 ನಿವೇಶನಗಳನ್ನು ಖರೀದಿಸಿ ಮೋಸ ಹೋಗಬೇಡಿ. 50:50 ಅನುಪಾತದಲ್ಲಿ ಹಂಚಿಕೆಯಾದ ನಿವೇಶನ ಖರೀದಿಸದಂತೆ ಮನವಿ ಮಾಡಿದ್ದಾರೆ. ನಿವೇಶನ ಖರೀದಿಸಿದರೆ ಮೋಸ, ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಿವೇಶನ ಖರೀದಿಸಿದವರು ಮನೆ ನಿರ್ಮಾಣ ಮಾಡದಂತೆ ಸಲಹೆ ನೀಡಿದ್ದಾರೆ. ಅಕ್ರಮ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಎರಡು ತನಿಖಾ ಸಂಸ್ಥೆಗಳಿಂದ ತನಿಖೆ ಕೈಗೊಳ್ಳಲಾಗಿದೆ. ತಮ್ಮ ದೂರಿನ ಆಧಾರದಲ್ಲಿ ಮುಡಾ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ನಿವೇಶನಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಮುಡಾದ 50:50 ನಿವೇಶನಗಳನ್ನು ಯಾರೂ ಖರೀದಿಸಬೇಡಿ ಎಂದು ಜಾಲತಾಣದ ಮೂಲಕ ಸಾರ್ವಜನಿಕರಿಗೆ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
“ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳನ್ನು ದಯವಿಟ್ಟು ಯಾರೂ ಖರೀದಿಸಿ, ಮೋಸ ಹೋಗಬೇಡಿ, ನಷ್ಟ ಅನುಭವಿಸಬೇಡಿ ಮತ್ತು ಈಗಾಗಲೇ ಖರೀದಿಸಿರುವವರು ಮನೆ ಕಟ್ಟಿಬಿಟ್ಟರೆ ವಶ ಪಡಿಸಿಕೊಳ್ಳುವುದಿಲ್ಲ ಎಂಬ ಕಾರಣದಿಂದ ಮನೆ ಕಟ್ಟಬೇಡಿ. 50:50 ಅನುಪಾತದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದರಿಂದ, ನನ್ನ ದೂರರ್ಜಿ ಆಧರಿಸಿ ಎರಡು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ, ಕಾನೂನಿನ ಪ್ರಕಾರ, ಸದರಿ ನಿವೇಶನಗಳನ್ನು ವಶಕ್ಕೆ ಪಡೆಯಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.