ಬೆಂಗಳೂರು: ರಾಜ್ಯದ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯ ಬಿಸಿ ತಗಲುವ ಸಾಧ್ಯತೆಯಿದೆ. ಹಾಲಿನ ದರ ಹೆಚ್ಚಳದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ನಾಳೆ ಅತ್ಯಂತ ಮಹತ್ವದ ಸಭೆಯನ್ನು ಕರೆದಿದೆ. ರೈತರ ಹಿತದೃಷ್ಟಿ ಹಾಗೂ ನಿರ್ವಹಣಾ ವೆಚ್ಚದ ನೆಪದಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು ಹೆಚ್ಚಿಸಲು ಹಾಲು ಒಕ್ಕೂಟಗಳು ಸಜ್ಜಾಗಿದ್ದು, ನಾಳೆಯ ಸಭೆಯಲ್ಲಿ ಈ ಕುರಿತು ಪ್ರಮುಖ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸುವಂತೆ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‌ಗೆ ಮನವಿ ಸಲ್ಲಿಸಿವೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಒಕ್ಕೂಟಗಳ ಪದಾಧಿಕಾರಿಗಳು ಮನವಿ ಪತ್ರ ನೀಡಿದ್ದಾರೆ. ನಾಳೆ ನಡೆಯಲಿರುವ ಕೆಎಂಎಫ್ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದ್ದು, ಪ್ರತಿ ಲೀಟರ್‌ಗೆ 4 ರಿಂದ 6 ರೂಪಾಯಿವರೆಗೆ ದರ ಹೆಚ್ಚಳ ಮಾಡಲು ತೀರ್ಮಾನಿಸುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಕ್ಕೂ ಹಾಲಿನ ದರ ಏರಿಕೆಯ ಕುರಿತು ಸಕಾರಾತ್ಮಕ ಒಲವಿರುವುದು ಒಕ್ಕೂಟಗಳಿಗೆ ಮತ್ತಷ್ಟು ಬಲ ತಂದಿದೆ.
ಸಭೆಯಲ್ಲಿ ದರ ಏರಿಕೆಯ ಕುರಿತು ಅಂತಿಮ ನಿರ್ಣಯ ಕೈಗೊಂಡ ಬಳಿಕ, ಆ ಪ್ರಸ್ತಾವನೆಯನ್ನು ಕೆಎಂಎಫ್ ರಾಜ್ಯ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಿದೆ. ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಗೆ ಅಂತಿಮ ಮುದ್ರೆ ಬಿದ್ದ ಬಳಿಕ ಅಧಿಕೃತ ಆದೇಶ ಹೊರಬೀಳಲಿದೆ. ಪ್ರಸ್ತುತ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 46 ರೂಪಾಯಿ ಇದ್ದು, ಒಂದು ವೇಳೆ ದರ ಏರಿಕೆಗೆ ಸರ್ಕಾರ ಸಮ್ಮತಿಸಿದರೆ ಲೀಟರ್ ಹಾಲಿನ ಬೆಲೆ 50 ರಿಂದ 51 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಸಾಮಾನ್ಯ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಹೊರೆಯಾಗಲಿದೆ.