ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಸೇನೆಯು ರಾತ್ರೋರಾತ್ರಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ವಾಯುಪಡೆಯನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯನ್ನು ಮಧ್ಯರಾತ್ರಿಯ ನಂತರ ನಡೆಸಲಾಯಿತು.
ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು, ಅಫ್ಘಾನ್ ಪ್ರಾಂತ್ಯಗಳಾದ ಪಕ್ತಿಕಾ, ಪಕ್ತಿಯಾ ಮತ್ತು ಕುನಾರ್‌ಗಳಲ್ಲಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೇಳಿದ್ದು, ಈ ಕಾರ್ಯಾಚರಣೆಯು ಉಗ್ರಗಾಮಿ ನೆಲೆಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದೇಶಾದ್ಯಂತ ನಡೆದ ಹಲವಾರು ಉಗ್ರಗಾಮಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಉಗ್ರರ ಅಡಗುತಾಣಗಳು ಮತ್ತು ಸುರಕ್ಷಿತ ತಾಣಗಳ ವಿರುದ್ಧ ನಿರ್ಣಯಿತ ದಾಳಿಗಳನ್ನು ಪ್ರಾರಂಭಿಸಲಾಗಿದೆ ಎಂದು ತರಾರ್ ಹೇಳಿದ್ದಾರೆ.
ಕರಾಚಿಯಲ್ಲಿರುವ ಅರೆಸೈನಿಕ ರೇಂಜರ್ಸ್‌ನ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆದು ಮೂವರು ಸೈನಿಕರು ಸಾವನ್ನಪ್ಪಿದ ನಂತರ ಈ ದಾಳಿ ನಡೆದಿದೆ. ನಂತರ, ಪಾಕಿಸ್ತಾನಿ ತಾಲಿಬಾನ್‌ನ ಬೇರ್ಪಟ್ಟ ಬಣವಾದ ಜಮಾತ್-ಉಲ್-ಅಹ್ರಾರ್ ಕರಾಚಿ ದಾಳಿಯ ಹೊಣೆಯನ್ನು ಹೊತ್ತುಕೊಂಡು ಹೇಳಿಕೆ ನೀಡಿದೆ.
ನಾಗರಿಕ ಪ್ರದೇಶಗಳ ಗುರಿ…?
ಅಫ್ಘಾನ್ ಮೂಲಗಳ ಪ್ರಕಾರ, ದಾಳಿಯಲ್ಲಿ ಪಕ್ತಿಕಾ ಪ್ರಾಂತ್ಯದ ಗಿಯಾನ್ ಜಿಲ್ಲೆ, ಪಕ್ತಿಯಾ ಪ್ರಾಂತ್ಯದ ತ್ಸಾಮ್ಕಾನಿ ಜಿಲ್ಲೆ ಮತ್ತು ಕುನಾರ್ ಪ್ರಾಂತ್ಯದ ಮರವಾರಾ ಜಿಲ್ಲೆಯಲ್ಲಿರುವ ವಸತಿ ಪ್ರದೇಶಗಳು ಮತ್ತು ಮಸೀದಿ ಹಾನಿಯಾಗಿದೆ. ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.