ಬೆಂಗಳೂರು:ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ಸಂಸ್ಥೆಯ ‘6E 6542’ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ, ಅದರ ಹಿಂಭಾಗವು (Tail) ರನ್‌ವೇಗೆ ತಾಗಿದ (Tail Strike) ಘಟನೆ ಸಂಭವಿಸಿದೆ. ಹವಾಮಾನದಲ್ಲಾದ ಏಕಾಏಕಿ ಬದಲಾವಣೆ ಹಾಗೂ ಭಾರೀ ಗಾಳಿಯ ತೀವ್ರತೆಯೇ ಈ ಘಟನೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಮೊದಲ ಯತ್ನದಲ್ಲಿ ಲ್ಯಾಂಡಿಂಗ್ ಮಾಡಲು ಹೋದಾಗ ನಿಯಂತ್ರಣ ಸಿಗದೆ ಈ ಘಟನೆ ನಡೆದಿದ್ದು, ಕೂಡಲೇ ಜಾಗರೂಕರಾದ ಪೈಲಟ್ ವಿಮಾನವನ್ನು ಮತ್ತೆ ಮೇಲಕ್ಕೆತ್ತಿದ್ದಾರೆ. ಬಳಿಕ ಎರಡನೇ ಬಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಪೈಲಟ್ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಪ್ರಯಾಣಿಕರೆಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಘಟನೆ ಸಂಭವಿಸಿದ ಬೆನ್ನಲ್ಲೇ ಸುರಕ್ಷತಾ ದೃಷ್ಟಿಯಿಂದ ಈ ವಿಮಾನದ ಮುಂದಿನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ವಿಮಾನವನ್ನು ಸಂಪೂರ್ಣ ದುರಸ್ತಿ ಹಾಗೂ ಅಗತ್ಯ ನಿರ್ವಹಣಾ ಪರಿಶೀಲನೆಗೆ ಒಳಪಡಿಸಲಾಗಿದೆ. ಸಂಬಂಧಪಟ್ಟ ವಿಮಾನಯಾನ ಅಧಿಕಾರಿಗಳು ಮತ್ತು ತಾಂತ್ರಿಕ ತಂಡದಿಂದ ಅಗತ್ಯ ಅನುಮತಿ ಲಭಿಸಿದ ನಂತರವಷ್ಟೇ ಈ ವಿಮಾನವನ್ನು ಮರಳಿ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಇನ್ನು ಈ ಘಟನೆಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ. ಪೈಲಟ್ ಕಾರ್ಯವೈಖರಿ ಮತ್ತು ವಿಮಾನ ನಿಲ್ದಾಣದ ಹವಾಮಾನ ಸ್ಥಿತಿಗತಿಗಳ ಕುರಿತು ತನಿಖೆ ಮುಂದುವರಿದಿದೆ.