ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ನಡೆದಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಜಿದಾರರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಪರ ವಕೀಲರು ಸುದೀರ್ಘ ವಾದ-ಪ್ರತಿವಾದ ಮಂಡಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಣಯಕ್ಕೆ ಯಾವುದೇ ಸಮರ್ಥನೆ ಇಲ್ಲ: ಅರ್ಜಿದಾರರ ಪರ ವಕೀಲ ಅಂಗದ ಕಾಮತ್ ವಾದ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಂಗದ ಕಾಮತ್, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆಯೇ ಹೊರತು ರಾಜ್ಯ ಸರ್ಕಾರಗಳಿಗಲ್ಲ ಎಂದು ಪ್ರತಿಪಾದಿಸಿದರು. "ವಂದೇ ಮಾತರಂ ಗೀತೆಯಲ್ಲಿ ಒಟ್ಟು 6 ಪ್ಯಾರಾಗಳಿದ್ದು, ಅದನ್ನು 3 ನಿಮಿಷ 10 ಸೆಕೆಂಡುಗಳಲ್ಲಿ ಹೇಗೆ ಹಾಡಬೇಕು ಎಂಬುದರ ಬಗ್ಗೆ ಕೇಂದ್ರ ಗೃಹ ಇಲಾಖೆಯು ಸ್ಪಷ್ಟ ಅಧಿಸೂಚನೆ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ನಡಾವಳಿಯಲ್ಲಿ ಲೋಪವಿದ್ದು, ಕ್ಯಾಬಿನೆಟ್ ನೋಟ್ ಕೂಡ ಇಲ್ಲದೆ, ಯಾವುದೇ ಇಲಾಖೆಯ ಪ್ರಸ್ತಾಪವಿಲ್ಲದೆ ಅನೌಪಚಾರಿಕವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ," ಎಂದು ಕೋರ್ಟ್‌ಗೆ ತಿಳಿಸಿದರು.
ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ: ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ, ಸುಪ್ರೀಂ ಕೋರ್ಟ್‌ನ ಹಳೆಯ ಆದೇಶಗಳನ್ನು ಉಲ್ಲೇಖಿಸಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. "ಜನಗಣಮನ ರಾಷ್ಟ್ರಗೀತೆ ಕಡ್ಡಾಯವಾಗಿದೆಯಾದರೂ, ವಂದೇ ಮಾತರಂ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 1932ರಿಂದಲೂ ಕೇವಲ ಎರಡು ಚರಣಗಳನ್ನು ಹಾಡುವ ಪರಿಪಾಠವಿದೆ. ರಾಜ್ಯ ಸರ್ಕಾರವು ತನ್ನ ಅಧಿಕೃತ ಕಾರ್ಯಕ್ರಮಗಳಲ್ಲಿ ಮಾತ್ರ 2 ಚರಣಗಳನ್ನು ಹಾಡಲು ನಿರ್ಧರಿಸಿದೆ. ಇದಲ್ಲದೆ, ಅರ್ಜಿದಾರರು ತಾವು ಯಾವುದೇ ಸಂಘಟನೆಗೆ ಸೇರಿಲ್ಲ ಎಂದು ಸುಳ್ಳು ಪ್ರಮಾಣಪತ್ರ ನೀಡಿದ್ದು, ಅವರು ರಾಜಕೀಯ ಪಕ್ಷವೊಂದರ ಭಾಗವಾಗಿದ್ದಾರೆ," ಎಂದು ಆರೋಪಿಸಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು.
ಕೇಂದ್ರದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸಬೇಕು: ಎಎಸ್‌ಜಿ ಅರವಿಂದ್ ಕಾಮತ್ ಪ್ರತಿಪಾದನೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅರವಿಂದ್ ಕಾಮತ್, ವಂದೇ ಮಾತರಂ ಈಗ ರಾಷ್ಟ್ರೀಯ ಹಾಡಾಗಿ ಪರಿಗಣಿಸಲ್ಪಟ್ಟಿದೆ ಎಂದು ಪೀಠ ಗಮನಕ್ಕೆ ತಂದರು. "ಏಪ್ರಿಲ್ 9, 2026 ರಂದು ಸುಪ್ರೀಂ ಕೋರ್ಟ್ ಮುಂದೆ ಪಿಐಎಲ್ ವಿಚಾರಣೆಗೆ ಬಂದಾಗ ಈ ಬಗ್ಗೆ ಚರ್ಚೆಯಾಗಿದೆ. ವಂದೇ ಮಾತರಂ ಗೀತೆಯನ್ನು ಎಷ್ಟು ಪ್ಯಾರಾ ಹಾಡಬೇಕು ಹಾಗೂ ಅದರ ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸಬೇಕಾಗುತ್ತದೆ. ಕೇಂದ್ರ ನೀಡಿರುವ ಆದೇಶ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕಿದೆ," ಎಂದು ವಾದ ಮಂಡಿಸಿದರು.