ಬೆಂಗಳೂರು : ರಾಜ್ಯದ ಸಿನಿಮಾ ಪ್ರೇಕ್ಷಕರಿಗೆ ಕರ್ನಾಟಕ ಸರ್ಕಾರ ಭಾರಿ ಆಘಾತ ನೀಡಿದ್ದು, ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಹೆಚ್ಚುವರಿ ಸೆಸ್ (ಉಪಕರ) ವಿಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. 2024 ರಲ್ಲಿ ಸರ್ಕಾರ ಮಂಡಿಸಿದ್ದ 'ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ'ಕ್ಕೆ ಕೊನೆಗೂ ಚಾಲನೆ ಸಿಕ್ಕಿದ್ದು, ಈ ಹೊಸ ನಿಯಮವು ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಈ ಪ್ರಮುಖ ಮಸೂದೆಗೆ 2024ರ ಸೆಪ್ಟೆಂಬರ್ 23 ರಂದು ಕರ್ನಾಟಕದ ರಾಜ್ಯಪಾಲರು ಅಂಕಿತ ಹಾಕಿದ್ದರು. ಅದಾದ ಮರುದಿನವೇ (ಸೆಪ್ಟೆಂಬರ್ 24) ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಸುಮಾರು ಎರಡು ವರ್ಷಗಳ ಸುದೀರ್ಘ ಪ್ರಕ್ರಿಯೆ ಮತ್ತು ತಯಾರಿಯ ಬಳಿಕ ಇದೀಗ ಅಧಿನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುತ್ತಿದೆ.
ಹೊಸ ನಿಯಮ ಜಾರಿಯಾದ ಬಳಿಕ ಮಲ್ಟಿಪ್ಲೆಕ್ಸ್ ಸೇರಿದಂತೆ ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡುವ ಗ್ರಾಹಕರು ಟಿಕೆಟ್ ದರದ ಜೊತೆಗೆ ಹೆಚ್ಚುವರಿಯಾಗಿ 2% ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, 200 ರೂಪಾಯಿ ಮುಖಬೆಲೆಯ ಟಿಕೆಟ್ ಖರೀದಿಸಿದರೆ ಹೆಚ್ಚುವರಿಯಾಗಿ 4 ರೂಪಾಯಿ ಸೆಸ್ ನೀಡಬೇಕಾಗುತ್ತದೆ. ಟಿಕೆಟ್‌ಗಳ ಮೂಲಕ ಸಂಗ್ರಹವಾಗುವ ಈ ಹಣವನ್ನು ಸಂಪೂರ್ಣವಾಗಿ ಸಿನಿಮಾ ರಂಗದ ಕಾರ್ಮಿಕರ ಕಲ್ಯಾಣ ಹಾಗೂ ಕ್ಷೇಮಾಭಿವೃದ್ಧಿ ಯೋಜನೆಗಳಿಗಾಗಿ ಮಾತ್ರ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.