ಬೆಂಗಳೂರು: ಬಿಡದಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಬಿಡದಿ ಸ್ಮಾರ್ಟ್ ಸಿಟಿ (ಟೌನ್‌ಷಿಪ್) ಯೋಜನೆಗೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಧರಣಿ-ಪ್ರತಿಭಟನೆಗಳು ಮುಂದುವರಿದಿವೆ. ಹೀಗಿದ್ದರೂ, ಯೋಜನೆಗೆ ಒಪ್ಪಿಗೆ ಸೂಚಿಸಿದ ರೈತರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (GBDA) ಪರಿಹಾರ ಹಂಚಿಕೆ ಪ್ರಕ್ರಿಯೆಯನ್ನು ಸಮರಸಾದಿ ರೀತಿಯಲ್ಲಿ ಮುಂದುವರಿಸಲಾಗಿದೆ. ಯೋಜನೆಯ ಪರವಾಗಿರುವ ರೈತರಿಗೆ ಇದುವರೆಗೆ ಒಟ್ಟು 1,800 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ.
ಈ ಯೋಜನಾ ವ್ಯಾಪ್ತಿಯ ಏಳು ಕಂದಾಯ ಗ್ರಾಮಗಳಲ್ಲಿ ಎರಡು ಹಂತಗಳಲ್ಲಿ ಫೈನಲ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಜೂನ್ 11ರಂದು ಮೊದಲ ಹಂತದ ಅಂತಿಮ ಅಧಿಸೂಚನೆ ಹಾಗೂ ಜುಲೈ 15ರಂದು ಎರಡನೇ ಹಂತದ ಫೈನಲ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಒಟ್ಟಾರೆಯಾಗಿ 5,456 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಗೊಂಡಿದ್ದು, ಒಟ್ಟು 4,116 ಖಾತೆದಾರರಿದ್ದಾರೆ. ಈ ಪೈಕಿ ಪರಿಹಾರ ಪಡೆದುಕೊಳ್ಳಲು 1,280 ರೈತರು ಅರ್ಜಿ ಸಲ್ಲಿಸಿದ್ದು, ಸದ್ಯ 816 ರೈತರಿಗೆ 1,800 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಹಂಚಿಕೆಯಾದ ಒಟ್ಟು ಪರಿಹಾರದಲ್ಲಿ 1,236 ಕೋಟಿ ರೂಪಾಯಿಯನ್ನು ನಗದು ರೂಪದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗಿದ್ದರೆ, ಅಭಿವೃದ್ಧಿಪಡಿಸಿದ ನಿವೇಶನದ ರೂಪದಲ್ಲಿ 250 ಎಕರೆಗೆ ಸಂಬಂಧಿಸಿದಂತೆ 564 ಕೋಟಿ ರೂಪಾಯಿ ಮೌಲ್ಯದ ಪರಿಹಾರವನ್ನು ವಿತರಿಸಲಾಗಿದೆ. ಪ್ರತಿ ಗುರುವಾರ GBDA ವತಿಯಿಂದ ಪರಿಹಾರ ಹಣ ವಿತರಣೆ ಮಾಡಲಾಗುತ್ತಿದ್ದು, 'ಎಷ್ಟು ಪರಿಹಾರ ನೀಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ' ಎಂದು ಜೆಡಿಎಸ್ ನಾಯಕರು ಸವಾಲು ಎಸೆದಿರುವುದು ಪ್ರಚಲಿತ ಬೆಳವಣಿಗೆಗೆ ಮತ್ತಷ್ಟು ಕಾವು ತಂದಿದೆ.
ಇನ್ನೊಂದೆಡೆ, ಈ ಬೃಹತ್ ಯೋಜನೆಗೆ ಹಣಕಾಸಿನ ಅಭಾವ ಎದುರಾಗದಂತೆ ನೋಡಿಕೊಳ್ಳಲು ಸರ್ಕಾರ ಸುಮಾರು 12,000 ಕೋಟಿ ರೂಪಾಯಿ ಸಾಲ ಪಡೆಯಲು ಚಿಂತನೆ ನಡೆಸಿದೆ. ಜಾಗತಿಕ ಹಣಕಾಸು ಸಂಸ್ಥೆಯಾದ ಹುಡ್ಕೋ (HUDCO) ಸಂಸ್ಥೆಯಿಂದ ಈ ಬೃಹತ್ ಪ್ರಮಾಣದ ಸಾಲ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ಸದ್ಯ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬೈರಮಂಗಲ ಹಾಗೂ ಕಂಚಗಾರನಹಳ್ಳಿ ಎಂಬ ಎರಡು ಕಂದಾಯ ಗ್ರಾಮಗಳ ಅಂತಿಮ ಅಧಿಸೂಚನೆ (ಫೈನಲ್ ನೋಟಿಫಿಕೇಶನ್) ಹೊರಡಿಸುವುದು ಮಾತ್ರ ಬಾಕಿ ಉಳಿದಿದೆ. ಇವೆರಡು ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಟೌನ್‌ಷಿಪ್ ಯೋಜನೆಗೆ ಅಗತ್ಯವಿರುವ ಭೂಪ್ರದೇಶ ಸಂಪೂರ್ಣವಾಗಿ ಪ್ರಾಧಿಕಾರದ ವಶಕ್ಕೆ ಬರಲಿದೆ.